ಉದಯವಾಹಿನಿ, ಊಟ ಬಲ್ಲವನಿಗೆ ರೋಗವಿಲ್ಲ ಮಾತ್ರವೇ ಅಲ್ಲ, ಊಟ ಬಲ್ಲವನಿಗೆ ವಯಸ್ಸೂ ಆಗುವುದಿಲ್ಲ ಎನ್ನುತ್ತಾರೆ ಆಹಾರ ತಜ್ಞರು. ಅಂದರೆ ಸರಿಯಾಗಿ ಊಟ ಮಾಡುವವರು ಚಿರಯೌವನಿಗರು ಎಂದಲ್ಲ, ಆದರೆ ಅವರಿಗೆ ಬೇಗ ವಯಸ್ಸಾದಂತೆ ಕಾಣುವುದಿಲ್ಲ ಎಂಬುದು ತಾತ್ಪರ್ಯ. ಯಾವುದೋ ಮದುವೆ- ಕೂಟಗಳಿಗೆ ಹೋಗುವುದಿದ್ದರೆ ತುರ್ತಾಗಿ ಮುಖದ ಕಾಂತಿ ಹೆಚ್ಚಿಸಿಕೊಳ್ಳುವುದಕ್ಕೆ ಎಲ್ಲರಲ್ಲಿಯೂ ಏನಾದರೊಂದು ಉಪಾಯ ಇರುತ್ತದೆ. ಆದರೆ ಇವೆಲ್ಲಾ ತಾತ್ಕಾಲಿಕ ಎಂದಾಯಿತು. ಒಳಗಿನಿಂದ ಚರ್ಮದ ಕಾಂತಿಯನ್ನು ಹೆಚ್ಚಿಸಿಕೊಳ್ಳಬೇಕು ಎಂದಾದರೆ, ಯಾವುದೋ ಕ್ರೀಮ್, ಸೋಪು ಇತ್ಯಾದಿಗಳಿಂದ ಸಾಧ್ಯವಿಲ್ಲ. ತ್ವಚೆಗೆ ಸತ್ವವೂ ಒಳಗಿನಿಂದಲೇ ದೊರೆಯಬೇಕೆ ಹೊರತು ಮೇಲಿನಿಂದ ಅಲ್ಲ. ದೇಹಕ್ಕೆ ವಯಸ್ಸಾಗುತ್ತಿದ್ದಂತೆ ಸಾಯುವ ಜೀವಕೋಶಗಳನ್ನು ಮತ್ತೆ ಮತ್ತೆ ಸೃಷ್ಟಿಸಿಕೊಳ್ಳಲು ಸೂಕ್ತವಾದ ಆಹಾರ ಸೇವಿದಾಗ ಮಾತ್ರವೇ, ಚರ್ಮಕ್ಕಾಗುವ ಹಾನಿಯನ್ನು ತುಂಬಲು ಸಾಧ್ಯ. ಅದಕ್ಕಾಗಿ ಏನು ಮಾಡಬೇಕು?
ವಯಸ್ಸಾಗುವುದು ಸಾಮಾನ್ಯ ದೈಹಿಕ ಪ್ರಕ್ರಿಯೆ. ಆಂತರಿಕವಾಗಿ ಕಾಲಕ್ರಮೇಣ ವಯಸ್ಸಾಗುವುದನ್ನು ತಡೆಯಲು ಸಾಧ್ಯವಿಲ್ಲ. ಆದರೆ ಬಾಹ್ಯಸ್ವರೂಪದಲ್ಲಿ, ಅಂದರೆ ನಿದ್ದೆ ಸಾಕಾಗದೆ, ಪೋಷಣೆ ಕಡಿಮೆಯಾಗಿ, ಧೂಳು, ಹೊಗೆಯಂಥ ಮಾಲಿನ್ಯಗಳಿಂದ ಚರ್ಮ ಸುಕ್ಕಾಗುವುದನ್ನು ತಡೆಯುವುದು ಅಸಾಧ್ಯವೇನಲ್ಲ. ಜೀವನಶೈಲಿಯನ್ನು ಆರೋಗ್ಯಕರವಾಗಿ ಉಳಿಸಿಕೊಂಡು, ಖನಿಜಗಳು ಮತ್ತು ಜೀವಸತ್ವಗಳನ್ನು ಒಳಗೊಂಡ ಆಹಾರ ನಮ್ಮ ಬದುಕಿನ ಭಾಗವಾದರೆ ಚರ್ಮವನ್ನು ನಳನಳಿಸುವಂತೆ ಇರಿಸಿಕೊಳ್ಳಲು ಆಗುತ್ತದೆ.
ಸೂಕ್ತ ಪೋಷಣೆ: ವಿಟಮಿನ್ ಎ ಅಥವಾ ಕೆರೋಟಿನಾಯ್ಡ್‌ನಂಥ ಸತ್ವಗಳು ಪ್ರಮುಖವಾಗಿ ಬೇಕು. ಕ್ಯಾರೆಟ್, ಗೆಣಸು, ದಪ್ಪ ಮೆಣಸು, ಪಪ್ಪಾಯಿ, ಮಾವು ಮುಂತಾದ ಹಣ್ಣು-ತರಕಾರಿಗಳಲ್ಲಿ ವಿಟಮಿನ್ ಎ ಯಥೇಚ್ಛವಾಗಿ ದೊರೆಯುತ್ತದೆ. ಚರ್ಮದ ಮೇಲೆ ಸೂಕ್ಷ್ಮ ನೆರಿಗೆಗಳು ಬರುವುದನ್ನು ತಡೆಯಲು ಈ ಸತ್ವ ಅಗತ್ಯವಾಗಿ ಬೇಕು. ವಿಟಮಿನ್ ಎ ಸತ್ವವಿರುವ ಆಹಾರಗಳನ್ನು ಊಟದ ತಟ್ಟೆಗೆ ಸೇರಿಸಿಕೊಳ್ಳುವುದಕ್ಕೆ ದಾಕ್ಷಿಣ್ಯ ಮಾಡದಿದ್ದರಾಯಿತು.
