ಉದಯವಾಹಿನಿ, ವಿಜಯಪುರ: ಭೀಮಾತೀರದ ಹಂತಕ ಬಾಗಪ್ಪ ಹರಿಜನ ಮಾಜಿ ಶಿಷ್ಯ ಸುಶೀಲ್ ಕಾಳೆ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪೊಲೀಸರು ಪರಾರಿಯಾಗಿದ್ದ ನಾಲ್ವರನ್ನು ಬಂಧಿಸಿದ್ದಾರೆ. ಗೌತಮ್ ಆಲಮೇಲಕರ, ನಾರಾಯಣ ಜಾಧವ್, ಬಸವರಾಜ್ ಮುನ್ನಾಳ, ಪ್ರಜ್ವಲ ಹಳಿಮನಿ ಬಂಧಿತ ಆರೋಪಿಗಳು. ಇದಕ್ಕೂ ಮುನ್ನ ಪೊಲೀಸರು ಅಪ್ರಾಪ್ತ ಸೇರಿ ಇಬ್ಬರನ್ನು ಬಂಧಿಸಿದ್ದರು. ಈ ಕುರಿತು ಎಸ್ಪಿ ಲಕ್ಷ್ಮಣ ನಿಂಬರಗಿ ಮಾತನಾಡಿ, ಹತ್ಯೆಯ ಬಳಿಕ ಪರಾರಿಯಾಗಿದ್ದ ಆರೋಪಿಗಳ ಪೈಕಿ ಅಪ್ರಾಪ್ತ ಸೇರಿ ಇಬ್ಬರನ್ನು ಇತ್ತೀಚಿಗೆ ಬಂಧಿಸಲಾಗಿತ್ತು. ಇದೀಗ ಇನ್ನುಳಿದಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಜೊತೆಗೆ ಬಂಧಿತರಿಂದ ಒಂದು ಕಂಟ್ರಿ ಮೇಡ್ ಪಿಸ್ತೂಲ್, ನಾಲ್ಕು ಜೀವಂತ ಗುಂಡುಗಳು, ಮೂರು ಬೈಕ್‌ಗಳನ್ನು ವಶಕ್ಕೆ ಪಡೆಯಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಏನಿದು ಘಟನೆ..?: ಜು.14ರಂದು ವಿಜಯಪುರ ನಗರದ ಎಸ್‌ಎಸ್ ಕಾಂಪ್ಲೆಕ್ಸ್‌ನಲ್ಲಿ ಭೀಮಾತೀರದ ಹಂತಕ ಬಾಗಪ್ಪ ಹರಿಜನ ಶಿಷ್ಯ ಸುಶೀಲ್ ಕಾಳೆಯನ್ನು ಭೀಕರವಾಗಿ ಹತ್ಯೆ ಮಾಡಲಾಗಿತ್ತು. ಹತ್ಯೆಯ ದೃಶ್ಯಗಳು ಸ್ಥಳದಲ್ಲೇ ಇದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ದೃಶ್ಯದಲ್ಲಿ ಸುಶೀಲ್ ಕಾಳೆಯನ್ನು ದುಷ್ಕರ್ಮಿಗಳು ಅಟ್ಟಾಡಿಸಿಕೊಂಡು, ಎಲ್ಲಿಗೂ ತಪ್ಪಿಸಿಕೊಂಡು ಹೋಗದಂತೆ ಬಿಡದೇ ಕೊನೆಗೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದರು. ಎಳನೀರು ಕೊಚ್ಚುವ ಮಚ್ಚಿನಿಂದ ಬೆನ್ನು, ತಲೆ, ಕುತ್ತಿಗೆ ಸೇರಿ ಹಲವೆಡೆ ಕೊಚ್ಚಿದ್ದರು. ಕೊನೆಗೆ ಮಚ್ಚನ್ನು ಸುಶೀಲ್ ಕಾಳೆ ದೇಹದ ಮೇಲೆ ಬಿಟ್ಟು ಪರಾರಿಯಾಗಿದ್ದರು.

 

Leave a Reply

Your email address will not be published. Required fields are marked *

error: Content is protected !!