ಉದಯವಾಹಿನಿ, ಬೆಂಗಳೂರು: ರಾಜ್ಯದ ಕಾಂಗ್ರೆಸ್ ಸರ್ಕಾರಕ್ಕೆ ಮುಜುಗರ ಉಂಟು ಮಾಡುವ ಸಚಿವರನ್ನು ಸಂಪುಟದಿಂದ ಕೈಬಿಡುವ ಬಗ್ಗೆ ಗಂಭೀರ ಚಿಂತನೆ ನಡೆಸುವಂತೆ ಹೈಕಮಾಂಡ್ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಸೂಚಿಸಿರುವುದು ಭಾರೀ ಸಂಚಲನ ಮೂಡಿಸಿದೆ. ಪದೇ ಪದೇ ವ್ಯತಿರಿಕ್ತ ಹೇಳಿಕೆಗಳು ಹಾಗೂ ನಡುವಳಿಕೆಗಳ ಮೂಲಕ ಸರ್ಕಾರಕ್ಕೆ ಕೆಲವು ಸಚಿವರು ಮುಜುಗರ ಉಂಟುಮಾಡುತ್ತಿದ್ದಾರೆ. ಎಷ್ಟೇ ಬಾರಿ ಸೂಚನೆ ನೀಡಿದ್ದರೂ ಗಂಭೀರವಾಗಿ ಅದನ್ನು ತೆಗೆದುಕೊಳ್ಳುತ್ತಿಲ್ಲ. ತಮಗೆ ಗಾಡ್‌ಫಾದರ್ ಇದ್ದಾರೆ ಎಂಬ ಕಾರಣಕ್ಕೆ ಮನಸ್ಸಿಗೆ ಬಂದಂತೆ ನಡೆದು ಕೊಳ್ಳುತ್ತಿದ್ದಾರೆ ಎಂದು ಹೈಕಮಾಂಡ್ ಅಸಮಾಧಾನ ವ್ಯಕ್ತಪಡಿಸಿದೆ. ಪಕ್ಷದಲ್ಲಿ ಹೈಕಮಾಂಡ್ ಮಾತ್ರ ಗಾಡ್‌ಫಾದರ್. ಉಳಿದಂತೆ ಯಾರೂ ದೊಡ್ಡವರಲ್ಲ ಎಂಬ ಸಂದೇಶ ರವಾನಿಸುವ ಮೂಲಕ ಗುಂಪುಗಾರಿಕೆಯಲ್ಲಿ ಮನಸ್ಸೋ ಇಚ್ಚೆ ವರ್ತಿಸುವವರಿಗೆ ಬ್ರೇಕ್ ಹಾಕುವಂತೆ ಹೈ ಕಮಾಂಡ್ ಬ್ರೇಕ್‌ಗೆ ಸೂಚಿಸಿರುವುದಾಗಿ ತಿಳಿದು ಬಂದಿದೆ.
ಸಚಿವರಾದ ಕೆ.ಎನ್. ರಾಜಣ್ಣ, ಜಮೀರ್ ಅಹಮದ್ ಖಾನ್ ಸೇರಿದಂತೆ ಅನೇಕರು ತಮ ಹೇಳಿಕೆಗಳ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಮುಜುಗರ ಉಂಟುಮಾಡುತ್ತಿದ್ದು, ಜೆಡಿಎಸ್ ಹಾಗೂ ಬಿಜೆಪಿ ಪಕ್ಷಗಳಿ ಗೆ ಟೀಕಾಸ್ತ್ರ ಒದಗಿಸಿಕೊಡುತ್ತಿದ್ದಾರೆ. ಎಷ್ಟು ಬಾರಿ ಸೂಚನೆ ನೀಡಿದ್ದರೂ ಸಚಿವರು ತಮ ನಡುವಳಿಕೆಗಳನ್ನು ಬದಲಾಯಿಸಿಕೊಳ್ಳುತ್ತಿಲ್ಲ. ಹೀಗಾಗಿ ಉದ್ದಟತನ ತೋರಿಸುವ ಸಚಿವರುಗಳನ್ನು ಸಂಪುಟದಿಂದ ಕೈಬಿಟ್ಟು ಕನಿಷ್ಟ ಪಕ್ಷ ಉತ್ಸಾಹಿ ಯುವಕರಿಗೆ ಅವಕಾಶ ಮಾಡಿಕೊಡುವಂತೆ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರಿಗೆ ಹೈ ಕಮಾಂಡ್ ತಾಕೀತು ಮಾಡಿದೆ.
