ಉದಯವಾಹಿನಿ, ಚಿತ್ರದುರ್ಗ: ಅನೈತಿಕ ಸಂಬಂಧದಿಂದ ನಡೆದಿದೆ ಎನ್ನಲಾದ ಕೊಲೆ ಪ್ರಕರಣವೊಂದರಲ್ಲಿ ಕಾಂಗ್ರೆಸ್ ಶಾಸಕ ಗೋವಿಂದಪ್ಪ ಅವರ ಕಾರು ಚಾಲಕನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಬಿಜಿ ಗೋವಿಂದಪ್ಪ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದ ಕಾಂಗ್ರೆಸ್ ಶಾಸಕರಾಗಿದ್ದು, ಕೊಲೆ ಪ್ರಕರಣದಲ್ಲಿ ಶಾಸಕರ ಚಾಲಕ ಯಶವಂತ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
ಮಾರ್ಚ್ 17ರಂದು ಜಾನಕಲ್ ಗ್ರಾಮದ ಪ್ರಸನ್ನ (45) ಎನ್ನುವ ವ್ಯಕ್ತಿ ನಾಪತ್ತೆಯಾಗಿದ್ದರು. ಮಾರ್ಚ್ 21ರಂದು ಈ ಕುರಿತು ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಚಿಕ್ಕಮಗಳೂರು ಜಿಲ್ಲೆಯ ಲಿಂಗದಳ್ಳಿ ಬಳಿ ಪ್ರಸನ್ನ ಅವರ ಶವ ಪತ್ತೆಯಾಗಿತ್ತು. ಕೊಲೆ ಮಾಡಿ ಲಿಂಗದಳ್ಳಿ ಬಳಿಯ ಅರಣ್ಯದಲ್ಲಿ ಪ್ರಸನ್ನರ ಶವವನ್ನು ಎಸೆಯಲಾಗಿತ್ತು.
ಪ್ರಕರಣದ ಹಿಂದೆ ಬಿದ್ದ ಪೊಲೀಸರಿಗೆ ಪ್ರಸನ್ನರ ಪತ್ನಿ ಗಾಯತ್ರಿ ಎಂಬಾಕೆಯ ಅಕ್ರಮ ಸಂಬಂಧದ ವಾಸನೆ ಬಡಿದಿದೆ. ಈ ಹಿನ್ನೆಲೆಯಲ್ಲಿ ತನಿಖೆ ಮುಂದುವರಿಸಿದ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಪ್ರಸನ್ನರ ಪತ್ನಿ ಗಾಯತ್ರಿ, ಶಾಸಕ ಗೋವಿಂದಪ್ಪ ಕಾರು ಚಾಲಕ ಯಶವಂತ್, ಲೋಹಿತ್ ಹಾಗೂ ವೀರೇಶ ಎಂಬವರನ್ನು ಹೊಸದುರ್ಗ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಲಿಂಗದಳ್ಳಿ ಮತ್ತು ಹೊಸದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.
