ಉದಯವಾಹಿನಿ, ಬೆಂಗಳೂರು: ಅಪ್ಪ-ಅಮನ ಜಗಳದಲ್ಲಿ ಕೂಸು ಬಡವಾಯಿತು ಎನ್ನುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಿತ್ತಾಟದಲ್ಲಿ ನಾಡಿನ ಅನ್ನದಾತ ಯೂರಿಯಾ ಗೊಬ್ಬರವಿಲ್ಲದೆ ಆಕಾಶದತ್ತ ಮುಖ ಮಾಡಿದ್ದಾನೆ. ರಾಜ್ಯದ ಸುಮಾರು 15ರಿಂದ 18 ಜಿಲ್ಲೆಗಳಿಗೆ ಗೊಬ್ಬರದ ಅಗತ್ಯವಿದ್ದು, ಸಕಾಲಕ್ಕೆ ತಮ ಬೆಳೆಗಳಿಗೆ ಅಗತ್ಯವಿರುವ ಗೊಬ್ಬರ ಸಿಗದೆ ರೈತರು ಕಂಗಾಲಾಗಿದ್ದಾರೆ. ಮೆಕ್ಕೆಜೋಳ, ಭತ್ತ ಸೇರಿದಂತೆ ಕೆಲವು ವಾಣಿಜ್ಯ ಬೆಳೆಗಳಿಗೆ ಗೊಬ್ಬರದ ಅಗತ್ಯತೆ ಕಂಡುಬರುತ್ತಿದ್ದು, ಸರ್ಕಾರಿ ಮತ್ತು ಖಾಸಗಿ ಗೋದಾಮುಗಳಲ್ಲಿ ಎಲ್ಲಿ ನೋಡಿದರೂ ನೋ ಸ್ಟಾಕ್‌ ಫಲಕ ಕಾಣುತ್ತಿದೆ. ರೈತರು ತಮ ಹೊಲ-ಗದ್ದೆಗಳಲ್ಲಿ ನಾಟಿ ಮಾಡಿದ್ದು, ಪೈರುಗಳು ಒಣಗುತ್ತಿದೆ ಎಂದು ಆಕ್ರೋಶ ವ್ಯಕ್ತವಾಗಿದೆ. ಬೆಳೆಗೆ ಗೊಬ್ಬರ ಅತ್ಯಗತ್ಯವಾಗಿದೆ. ಈ ಕಾರಣದಿಂದ ಗೊಬ್ಬರಕ್ಕಾಗಿ ರೈತರು ಬೆಳಗ್ಗೆಯಿಂದಲೇ ಸರತಿ ಸಾಲಿನಲ್ಲಿ ನಿಂತು ಯೂರಿಯಾ ಪಡೆಯುತ್ತಿರುವ ದೃಶ್ಯ ಕಂಡು ಬರುತ್ತಿದೆ. ಸಾಮಾನ್ಯವಾಗಿ ಜುಲೈ ಮತ್ತು ಆಗಸ್ಟ್‌ ತಿಂಗಳ ಮಧ್ಯ ಭಾಗದಲ್ಲಿ ರೈತರು ತಮ ಬೆಳೆದ ಬೆಳೆಗಳಿಗೆ 2ನೇ ಹಂತದ ಗೊಬ್ಬರ ಹಾಕುವುದು ವಾಡಿಕೆ. ಈ ಹಂತದಲ್ಲಿ ಗೊಬ್ಬರ ಹಾಕಿದರೆ ಬೆಳೆಗಳು ಉತ್ತಮ ಫಸಲು ತರುತ್ತವೆ ಎಂಬುದು ರೈತರ ನಂಬಿಕೆ.
ಆದರೆ ಸಕಾಲಕ್ಕೆ ಸರಿಯಾಗಿ ಗೊಬ್ಬರ ಕೈಗೆಟುಕದೆ ರೈತರು ಕಂಗಾಲಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ಹಾವೇರಿ, ಗದಗ, ಬಳ್ಳಾರಿ, ರಾಯಚೂರು, ಕೊಪ್ಪಳ, ಬಾಗಲಕೋಟೆ, ಕಲಬುರಗಿ, ಯಾದಗಿರಿ,ಬೀದರ್‌ ಸೇರಿದಂತೆ ಸುಮಾರು 15ರಿಂದ 18 ಜಿಲ್ಲೆಗಳಲ್ಲಿ ಗೊಬ್ಬರದ ಬೇಡಿಕೆ ಹೆಚ್ಚಾಗಿದೆ.ರಾಜ್ಯ ಸರ್ಕಾರದ ಮೇಲೆ ಕೇಂದ್ರ ಸರ್ಕಾರ, ಕೇಂದ್ರ ಸರ್ಕಾರದ ಮೇಲೆ ರಾಜ್ಯ ಸರ್ಕಾರ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಾ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡುತ್ತಿವೆ.
ಸಾಮಾನ್ಯವಾಗಿ ಮುಂಗಾರು ಆರಂಭಕ್ಕೂ ಮುನ್ನವೇ ರಾಜ್ಯ ಸರ್ಕಾರ ಕೇಂದ್ರಕ್ಕೆ ಪತ್ರ ಬರೆದು ಪ್ರಸಕ್ತ ವರ್ಷ ರಾಜ್ಯಕ್ಕೆ ಇಂತಿಷ್ಟು ಗೊಬ್ಬರವನ್ನು ಪೂರೈಕೆ ಮಾಡಬೇಕೆಂಬ ಬೇಡಿಕೆ ಪಟ್ಟಿಯನ್ನು ಸಲ್ಲಿಸಬೇಕು. ಇದು ಕರ್ನಾಟಕ ಮಾತ್ರವಲ್ಲದೆ ಎಲ್ಲಾ ರಾಜ್ಯಗಳು ಪ್ರತಿ ವರ್ಷ ಅನುಸರಿಸಿಕೊಂಡು ಬಂದಿರುವ ಅಲಿಖಿತ ಸಂಪ್ರದಾಯ.

Leave a Reply

Your email address will not be published. Required fields are marked *

error: Content is protected !!