ಉದಯವಾಹಿನಿ, ಚಾಮರಾಜನಗರ: ದೇಶದಲ್ಲಿ ಹುಲಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿದೆ. ಚಾಮರಾಜನಗರ ಜಿಲ್ಲೆಯಲ್ಲೂ ಕೂಡ ಕಳೆದ 15 ವರ್ಷದಲ್ಲಿ 150ಕ್ಕೂ ಹೆಚ್ಚು ಹುಲಿಗಳ ಸಂಖ್ಯೆ ಹೆಚ್ಚಾಗಿದ್ದು, ಅತಿಹೆಚ್ಚು ಹುಲಿಗಳನ್ನು ಪೋಷಿಸುತ್ತಿರುವ ಜಿಲ್ಲೆ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.ಪ್ರತಿ ವರ್ಷ ಜುಲೈ 29ರಂದು ‘ವಿಶ್ವ ಹುಲಿ ದಿನ’ವನ್ನಾಗಿ ಆಚರಿಸಲಾಗುತ್ತದೆ. ಹಿಂದೆ ಹುಲಿಗಳ ಸಂರಕ್ಷಣೆ ದೊಡ್ಡ ಸವಾಲಾಗಿತ್ತು. ಆದರೀಗ ಸಂರಕ್ಷಣೆ ಉತ್ತಮವಾಗಿದ್ದು, ಹುಲಿಗಳ ಸಂಖ್ಯೆಯಲ್ಲಿ ಗಣನೀಯವಾಗಿ ಏರಿಕೆಯಾಗಿದೆ. ಅದರಲ್ಲೂ ಗಡಿಜಿಲ್ಲೆ ಚಾಮರಾಜನಗರ ‘ಹುಲಿಗಳ ನಾಡು’ ಎಂದೇ ಹೆಸರು ಗಳಿಸಿದೆ.
ಚಾಮರಾಜನಗರ ಜಿಲ್ಲೆಯಲ್ಲಿ ಬಂಡೀಪುರ, ಬಿಳಿಗಿರಿ ರಂಗನಬೆಟ್ಟ ಎರಡೂ ಹುಲಿ ಸಂರಕ್ಷಿತ ಪ್ರದೇಶಗಳಾಗಿವೆ. ಮಲೆ ಮಹದೇಶ್ವರ ವನ್ಯಜೀವಿಧಾಮವೂ ಕೂಡ ಹುಲಿ ಸಂರಕ್ಷಿತ ಪ್ರದೇಶ ಆಗುವ ನಿರೀಕ್ಷೆಯಿದೆ. ಅದರ ಜೊತೆಗೆ ಕಾವೇರಿ ವನ್ಯಧಾಮ ಕೂಡ ಚಾಮರಾಜನಗರ ಜಿಲ್ಲೆಯಲ್ಲಿದೆ. ಎರಡು ಹುಲಿ ಸಂರಕ್ಷಿತ ಅರಣ್ಯ, ಎರಡು ವನ್ಯಧಾಮ ಹೊಂದಿರುವ ಜಿಲ್ಲೆ ಅಂದ್ರೆ ಅದು ಚಾಮರಾಜನಗರ. ಬಂಡೀಪುರ ಅರಣ್ಯ ಪ್ರದೇಶವು 1973ರಲ್ಲಿ ಮೊದಲಿಗೆ ಹುಲಿ ಸಂರಕ್ಷಿತ ಅರಣ್ಯಪ್ರದೇಶವಾಗಿ ಘೋಷಣೆಯಾಯಿತು. ಆ ಸಂದರ್ಭದಲ್ಲಿ 12 ಹುಲಿಗಳಷ್ಟೇ ಇತ್ತು ಎಂದು ಅಂದಾಜು ಮಾಡಲಾಗಿತ್ತು. ಕ್ರಮೇಣ ಹುಲಿಗಳ ಸಂರಕ್ಷಣೆ ಹೆಚ್ಚಾಗಿದೆ.
