ಉದಯವಾಹಿನಿ, ರಾಯಚೂರು: ತುಂಗಭದ್ರಾ ಜಲಾಶಯದಿಂದ ಭಾರೀ ಪ್ರಮಾಣದ ನೀರು ಬಿಡುಗಡೆ ಮಾಡಿರುವ ಹಿನ್ನೆಲೆ ಗುರುರಾಘವೇಂದ್ರ ಸ್ವಾಮಿಗಳು ತಪ್ಪಸ್ಸು ಮಾಡಿದ್ದ ಜಪದ ಕಟ್ಟೆ ಸಂಪೂರ್ಣವಾಗಿ ಜಲಾವೃತಗೊಂಡಿದೆ. ಜಲಾಶಯದಿಂದ ನದಿಗೆ ಭಾರೀ ಪ್ರಮಾಣದ ನೀರು ಹರಿದು ಬರುತ್ತಿರುವ ಹಿನ್ನೆಲೆ ತುಂಗಭದ್ರಾ ನದಿತೀರದಲ್ಲಿರುವ ರಾಯರ ಪರಮ ಭಕ್ತ ಅಪ್ಪಣ್ಣಾಚಾರ್ ನಿರ್ಮಿಸಿ ಪೂಜಿಸುತ್ತಿದ್ದ ಗುರುರಾಘವೇಂದ್ರ ಸ್ವಾಮಿ ಏಕಶಿಲಾ ವೃಂದಾವನ ಜಲಾವೃತಗೊಂಡಿದೆ. ಬಿಚ್ಚಾಲಮ್ಮ ದೇವಿ ದೇವಾಲಯ ಬಳಿ ನೀರು ನುಗಿದ್ದು, ಏಕಶಿಲಾ ವೃಂದಾವನ ದರ್ಶನ ಪಡೆಯಲು ಭಕ್ತರು ಪರದಾಡುತ್ತಿದ್ದಾರೆ.
ಗುರು ರಾಘವೇಂದ್ರ ಸ್ವಾಮಿಗಳು ತಪ್ಪಸ್ಸು ಮಾಡಿದ್ದ ಜಪದ ಕಟ್ಟೆಯೂ ಜಲಾವೃತಗೊಂಡಿದ್ದು, ಅರ್ಚಕರು ನೀರಿನಲ್ಲೇ ತೆರಳಿ ಪೂಜೆ, ಅಭಿಷೇಕ ಮಾಡುತ್ತಿದ್ದಾರೆ. ಜೊತೆಗೆ ಇಲ್ಲಿನ ಉಗ್ರನರಸಿಂಹ ದೇವಾಲಯ, ನಾಗದೇವತೆ ಕಟ್ಟೆ, ಶಿವಲಿಂಗ ಸಹ ಜಲಾವೃತಗೊಂಡಿದೆ.
1,633.00 ಅಡಿ ಗರಿಷ್ಠ ನೀರಿನ ಮಟ್ಟ ಹೊಂದಿರುವ ತುಂಗಭದ್ರಾ ಜಲಾಶಯದಲ್ಲಿ ಇಂದು 1,624.62 ಅಡಿ ನೀರಿದೆ. ಸದ್ಯ ಡ್ಯಾಂಗೆ 1,20,500 ಕ್ಯೂಸೆಕ್ ಒಳಹರಿವು ಇದ್ದು, 1,24,487 ಕ್ಯೂಸೆಕ್ ಹೊರಹರಿವಿದೆ
