ಉದಯವಾಹಿನಿ, ಲಂಡನ್: ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ ಐದು ಪಂದ್ಯಗಳ ಟೆಸ್ಟ್ ಸರಣಿ ಅಂತಿಮ ಪಂದ್ಯ ಜುಲೈ 31ರಿಂದ ದಿ ಓವಲ್‌ನಲ್ಲಿ ಆರಂಭವಾಗಲಿದೆ. ಆಡಿದ ನಾಲ್ಕು ಪಂದ್ಯಗಳಲ್ಲಿಯೂ ಭಾರತಕ್ಕೆ ಹಿನ್ನಡೆಯಾದದ್ದು ಬೌಲಿಂಗ್ ಮಾತ್ರ. ಪರಿಪೂರ್ಣ ಬೌಲಿಂಗ್ ಸಂಯೋಜನೆಯನ್ನು ಹುಡುಕುವಲ್ಲಿ ಭಾರತ ವಿಫಲವಾಗುತ್ತಲೇ ಬಂದಿದೆ. ಇದೀಗ 5ನೇ ಹಾಗೂ ಅಂತಿಮ ಪಂದ್ಯದಲ್ಲಿಯೂ ಭಾರತ ಬೌಲಿಂಗ್ ವಿಭಾಗದಲ್ಲಿ ಮತ್ತೆ ಬದಲಾವಣೆ ನಡೆಸುವುದು ಖಚಿತವಾಗಿದೆ.
ಗುರುವಾರ ಆರಂಭವಾಗುವ ಈ ಪಂದ್ಯವನ್ನು ಗೆದ್ದು ಸರಣಿಯನ್ನು 2-2 ಸಮಬಲಕ್ಕೆ ತರುವುದು ಗಿಲ್ ಬಳಗದ ಮುಂದಿರುವ ಸವಾಲು. ಅರ್ಶ್‌ದೀಪ್ ಸಿಂಗ್ ಮತ್ತು ಆಕಾಶ್‌ದೀಪ್ ಸಿಂಗ್ ಗಾಯಗೊಂಡ ಕಾರಣ ಅಚ್ಚರಿಯ ಟೆಸ್ಟ್ ಕರೆ ಪಡೆದ ಅಂಶುಲ್ ಕಂಬೋಜ್ ಮ್ಯಾಂಚೆಸ್ಟರ್‌ನಲ್ಲಿ ಪದಾರ್ಪಣೆ ಮಾಡಿದ್ದು. ಸರಣಿಯಿಂದ ಹೊರಬಿದ್ದ ನಿತೀಶ್ ಕುಮಾರ್ ಸ್ಥಾನದಲ್ಲಿ ಆಲ್‌ರೌಂಡರ್ ಶಾರ್ದೂಲ್ ಠಾಕೂರ್‌ಗೆ ಅವಕಾಶ ನೀಡಲಾಗಿತ್ತು. ಆದರೆ ಉಭಯ ಆಟಗಾರರು ಪರಿಣಾಮ ಬೀರುವಲ್ಲಿ ವಿಫಲರಾಗಿದ್ದರು. ಹೀಗಾಗಿ ಇವರನ್ನು ಅಂತಿಮ ಪಂದ್ಯದಿಂ ಕೈಬಿಡುವುದು ನಿಶ್ಚಿತ.
ಅಂಶುಲ್ ಜಾಗಕ್ಕೆ ಆಕಾಶ್ ದೀಪ್ ಅಥವಾ ಅರ್ಶ್‌ದೀಪ್ ಸಿಂಗ್ ವಾಪಸಾಗುವ ಸಂಭವವಿದೆ. ಆದರೆ ಇವರ ಫಿಟ್‌ನೆಸ್ ವರದಿ ಇನ್ನಷ್ಟೇ ಬರಬೇಕಿದೆ. ಸರಣಿಯುದ್ದಕ್ಕೂ ಮೂಲೆಗುಂಪಾಗಿರುವ ಕುಲದೀಪ್ ಯಾದವ್ ಅವರನ್ನು ಅಂತಿಮ ಪಂದ್ಯದಲ್ಲಿ ಆಡಿಸುವ ಸಾಧ್ಯತೆ ಇದೆ. ತಂಡದಲ್ಲಿ ಇರುವ ಇಬ್ಬರು ಸ್ಪಿನ್ ಆಲ್‌ರೌಂಡರ್‌ಗಳಾದ ಜಡೇಜಾ ಮತ್ತು ಸುಂದರ್ ಅಷ್ಟಾಗಿ ಬೌಲಿಂಗ್‌ನಲ್ಲಿ ಕ್ಲಿಕ್ ಆಗಿಲ್ಲ. ಆದರೆ ಬ್ಯಾಟಿಂಗ್‌ನಲ್ಲಿ ಇವರು ಕ್ಲಿಕ್ ಆಗಿದ್ದಾರೆ. ಹೀಗಾಗಿ ಇವರನ್ನು ತಂಡದಲ್ಲಿ ಉಳಿಸಿಕೊಂಡು ಶಾರ್ದೂಲ್ ಠಾಕೂರ್ ಜಾಗಕ್ಕೆ ಪೂರ್ಣ ಪ್ರಮಾಣದ ಸ್ಪಿನ್ನರ್ ಆಗಿ ಕುಲದೀಪ್ ಯಾದವ್‌ಗೆ ಅವಕಾಶ ನೀಡಬಹುದು.
