ಉದಯವಾಹಿನಿ, ಮಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಪ್ರಕರಣ ಸಂಬಂಧ ಟ್ವಿಸ್ಟ್ ಸಿಕ್ಕಿದ್ದು, ದೂರುದಾರ ವ್ಯಕ್ತಿ ನನಗೆ ಹೆಣ ಹೂಳಲು ಓರ್ವ ಪೊಲೀಸ್ ಅಧಿಕಾರಿ ಸಾಥ್ ನೀಡಿರುವುದಾಗಿ ತಿಳಿಸಿದ್ದಾನೆ. ಎಸ್‌ಐಟಿ (SIT) ವಿಚಾರಣೆ ವೇಳೆ ದೂರುದಾರ ವ್ಯಕ್ತಿ ಓರ್ವ ನಿವೃತ್ತ ಪೊಲೀಸ್ ಅಧಿಕಾರಿಯ ಹೆಸರನ್ನು ಬಾಯ್ಬಿಟ್ಟಿದ್ದಾನೆ. ನಾನು ಹೆಣ ಹೂಳುವಾಗ ಈ ಅಧಿಕಾರಿ ಕೂಡ ನನಗೆ ಸಾಥ್ ನೀಡಿರುವುದಾಗಿ ತಿಳಿಸಿದ್ದಾನೆ. ದೂರುದಾರನ ಮಾಹಿತಿ ಬೆನ್ನಲ್ಲೇ ಎಸ್‌ಐಟಿ ಅಧಿಕಾರಿಗಳು 1995ರಿಂದ ಧರ್ಮಸ್ಥಳ ಔಟ್ ಪೋಸ್ಟ್ ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡಿದವರ ಲಿಸ್ಟ್ ನೀಡುವಂತೆ ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿಗೆ ಮನವಿ ಪತ್ರ ಕಳುಹಿಸಿದ್ದಾರೆ.
ಇನ್ನೂ ಇಂದು ಎರಡನೇ ದಿನದ ಉತ್ಖನನ ಪ್ರಕ್ರಿಯೆ ಆರಂಭವಾಗಿದ್ದು, ಎಸಿ ಸ್ಟೆಲ್ಲಾ ವರ್ಗೀಸ್, ಡಿಐಜಿ ಅನುಚೇತ್, ತನಿಖಾಧಿಕಾರಿ ಜಿತೇಂದ್ರ ದಯಾಮ ಅವರ ಸಮ್ಮುಖದಲ್ಲೇ ಒಟ್ಟು 20 ಕಾರ್ಮಿಕರಿಂದ ಉತ್ಖನನ ಕಾರ್ಯ ನಡೆಯುತ್ತಿದೆ ಇಂದು ಒಂದೇ ಸಮಯದಲ್ಲಿ ಎರಡು ಪಾಯಿಂಟ್‌ನಲ್ಲಿ ಅಗೆಯುತ್ತಿದ್ದು, ಉತ್ಖನನ ಪ್ರಕ್ರಿಯೆ ಬೇಗ ಮುಗಿಸುವ ನಿಟ್ಟಿನಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಜೊತೆಗೆ 2 ರಿಂದ 8 ಸಂಖ್ಯೆಯವರೆಗೆ ಅರಣ್ಯ ಪ್ರದೇಶದಲ್ಲಿ ಗುರುತಿಸಲಾಗಿದ್ದು, ಈ ಜಾಗದಲ್ಲಿ ಹಿಟಾಟಿ ಹೋಗೋದು ಕಷ್ಟವಾಗಿದೆ. ಒಂದು ವೇಳೆ ಹೋದರೂ ಕೂಡ ಅರಣ್ಯ ಇಲಾಖೆ ಹೋಗದಂತೆ ನಿರ್ಬಂಧ ಹೇರಿದೆ. ಹೀಗಾಗಿ ಇಂದಿನ ಉತ್ಖನನ ಕಾರ್ಯ ಅಧಿಕಾರಿಗಳಿಗೆ ಸವಾಲಾಗಿ ಪರಿಣಮಿಸಿದೆ.
ಸೋಮವಾರ ದೂರುದಾರ (ಜು.28) 13 ಜಾಗಗಳನ್ನು ಗುರುತಿಸಿದ್ದ. ಅದಾದ ಬಳಿಕ ಮಂಗಳವಾರ ಮೊದಲು ಗುರುತು ಮಾಡಿದ್ದ ಸ್ಥಳದಿಂದಲೇ ಎಸ್‌ಐಟಿ ಅಗೆಯುವ ಕೆಲಸ ಆರಂಭಿಸಿತ್ತು, 12 ಜನ ಕಾರ್ಮಿಕರು, ನಾಲ್ವರು ವೈದ್ಯರು, ಸಹಾಯಕ ಸಿಬ್ಬಂದಿ, ವಿಧಿ ವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳ ಸಮ್ಮುಖದಲ್ಲೇ ಬೆಳಿಗ್ಗೆ 11 ಗಂಟೆಗೆ ಶುರುವಾದ ಶೋಧ ಕಾರ್ಯ 7 ತಾಸು ನಡೆದಿತ್ತು. ಆದರೆ 15 ಅಡಿ ಅಗಲ, 8 ಅಡಿ ಆಳ ಅಗೆದರೂ ಯಾವುದೇ ಕುರುಹು ಸಿಕ್ಕಿರಲಿಲ್ಲ. ಬಳಿಕ ಎಸ್‌ಐಟಿ ಅಧಿಕಾರಿಗಳು, ಆಳಕ್ಕೆ ಹೋದಷ್ಟು ಅಸ್ಥಿಪಂಜರ ಸಿಗಬಹುದು ಎನ್ನುವ ಕಾರಣಕ್ಕಾಗಿ ಹಿಟಾಚಿಯಿಂದಲೂ ಕಾರ್ಯಾಚರಣೆ ನಡೆಸಿದ್ದರು. ಆದರೂ ಕೂಡ ಯಾವುದೇ ಕಳೇಬರ ಸಿಕ್ಕಿರಲಿಲ್ಲ.
