ಉದಯವಾಹಿನಿ, ಬೆಂಗಳೂರು: ಕೆ.ಆರ್.ನಗರ ಮಹಿಳೆಯ ಅತ್ಯಾಚಾರ ಪ್ರಕರಣದಲ್ಲಿ ಅರೆಸ್ಟ್ ಆಗಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರ ಭವಿಷ್ಯ ಇಂದು (ಬುಧವಾರ) ನಿರ್ಧಾರವಾಗಲಿದೆ.26 ಸಾಕ್ಷಿಗಳ ವಿಚಾರಣೆ ನಡೆಸಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಈ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ದೋಷಿಯೋ ಅಥವಾ ಅಲ್ಲವೋ ಎಂದು ಇಂದು ತೀರ್ಪು ನೀಡಲಿದೆ. ಕಳೆದ 14 ತಿಂಗಳಿನಿಂದ ಸೆರೆವಾಸದಲ್ಲಿರುವ ಪ್ರಜ್ವಲ್ ರೇವಣ್ಣ ಅವರ ರಾಜಕೀಯ ಭವಿಷ್ಯದ ದೃಷ್ಟಿಯಿಂದಲೂ ಈ ತೀರ್ಪು ಬಹಳ ಮಹತ್ವದ್ದಾಗಿರಲಿದೆ.
ಈಗಾಗಲೇ ಕೆಆರ್ ನಗರ ಸಂತ್ರಸ್ತೆಯ ಅತ್ಯಾಚಾರ ಕೇಸ್‌ಲ್ಲಿ ವಾದ-ಪ್ರತಿವಾದ ಮುಕ್ತಾಯವಾಗಿ, ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜು.30ಕ್ಕೆ ಆದೇಶ ಕಾಯ್ದಿರಿಸಿತ್ತು. ಕೆ.ಆರ್ ನಗರ ಸಂತ್ರಸ್ತೆ ಪ್ರಕರಣದಲ್ಲಿ ಪ್ರಜ್ವಲ್ ವಿರುದ್ಧ ಅತ್ಯಾಚಾರ, ಅಪಹರಣ ಕೇಸ್ ದಾಖಲಾಗಿತ್ತು. ಸದ್ಯ ಪರಪ್ಪನ ಅಗ್ರಹಾರದ ಸೆಂಟ್ರಲ್ ಜೈಲಿನಲ್ಲಿದ್ದಾರೆ. ಇಂದಿನ ಪ್ರಕರಣದ ಕೇಸ್ ಖುಲಾಸೆಯಾದ್ರೂ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಇನ್ನೂ ಮೂರು ಪ್ರಕರಣಗಳು ಬಾಕಿ ಇರೋದ್ರಿಂದ ಕೇಸ್ ಖುಲಾಸೆಯಾದ್ರೂ ಬಿಡುಗಡೆ ಆಗೋದು ಅನುಮಾನವಾಗಿದೆ.
ಏನಿದು ಪ್ರಕರಣ?
ಕೆ.ಆರ್.ನಗರ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ನಂತರ ವಿಷಯ ಹೊರಗೆ ಬರುತ್ತೆ ಎಂದು ತಿಳಿದು ಸಂತ್ರಸ್ತೆಯನ್ನು ರೇವಣ್ಣ, ಭವಾನಿ, ಸತೀಶ್ ಬಾಬು ಸೇರಿದಂತೆ 9 ಜನ ಸೇರಿಕೊಂಡು ಅಪಹರಿಸಿದ್ದರು. ಬಳಿಕ ಆಕೆಯನ್ನು ಹುಣಸೂರು ಬಳಿಯ ತೋಟದ ಮನೆಯೊಂದರಲ್ಲಿ ಕೂಡಿ ಹಾಕಲಾಗಿತ್ತು. ಇದೇ ಅಪಹರಣ ಪ್ರಕರಣದಿಂದಲೇ ರೇವಣ್ಣ ಸೇರಿದಂತೆ 8 ಜನ ಜೈಲಿಗೆ ಹೋಗಿದ್ದರು. ಬಂಧನ ಭೀತಿಯಿಂದ ತಲೆಮರೆಸಿಕೊಂಡಿದ್ದ ಭವಾನಿ ರೇವಣ್ಣ ಬಳಿಕ ನಿರೀಕ್ಷಣಾ ಜಾಮೀನು ಪಡೆದಿದ್ದರು.
ಆನಂತರ ಸಂತ್ರಸ್ತೆಯನ್ನು ರಕ್ಷಿಸಿದ ಎಸ್‌ಐಟಿ, ಆಕೆಯ ಹೇಳಿಕೆ ದಾಖಲು ಮಾಡಿ ಪ್ರಕರಣ ದಾಖಲಿಸಿತ್ತು. ಹೇಳಿಕೆಯ ಮೇಲೆ ತನಿಖೆ ಮಾಡಿ ದೋಷಾರೋಪ ಪಟ್ಟಿ ಸಲ್ಲಿಸಿತ್ತು. ಬಳಿಕ ಪ್ರಜ್ವಲ್ ರೇವಣ್ಣ ಮೊಬೈಲ್‌ನಲ್ಲಿ ಸಂತ್ರಸ್ತೆಯನ್ನು ಬೆತ್ತಲುಗೊಳಿಸಿ ಬಲವಂತವಾಗಿ ಲೈಂಗಿಕ ಕಿರುಕುಳ ನೀಡಿದ್ದ ವಿಡಿಯೋವೊಂದು ಪತ್ತೆಯಾಗಿತ್ತು. ಇದು ಪ್ರಕರಣದ ಬಹುದೊಡ್ಡ ಸಾಕ್ಷ್ಯವಾಗಿ ಪರಿಣಮಿಸಿತು. ಕೊನೆಗೆ ಎಫ್‌ಎಸ್‌ಎಸ್ ಮೂಲಕ ವಿಡಿಯೋ ತುಣುಕಿನಲ್ಲಿರುವುದು ಪ್ರಜ್ವಲ್ ರೇವಣ್ಣ ಎನ್ನುವುದು ಸಾಬೀತಾಗಿತ್ತು.
