ಉದಯವಾಹಿನಿ, ಬೆಂಗಳೂರು: ಬೆಂಗಳೂರಿನಲ್ಲಿ ಕಿಲ್ಲರ್ ಬಿಎಂಟಿಸಿ ಮತ್ತೊಂದು ಬಲಿ ತೆಗೆದುಕೊಂಡಿದೆ. ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಡಿಕ್ಕಿ ಹೊಡೆದು ವೃದ್ಧೆಯೊಬ್ಬರು ಸಾವಿಗೀಡಾಗಿರುವ ಘಟನೆ ಸೆಂಟ್ರಲ್ ಸಿಲ್ಕ್ ಬೋರ್ಡ್ ಬಸ್ ನಿಲ್ದಾಣದ ಬಳಿ ನಡೆದಿದೆ. 62 ವರ್ಷದ ಹಿರಿಯ ನಾಗರಿಕರೊಬ್ಬರು ಎಲೆಕ್ಟ್ರಿಕ್ ಬಸ್ ಹರಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ರಿವರ್ಸ್ ತೆಗೆಯುವಾಗ ಬಸ್ ಹಿಂಬದಿಯಿಂದ ರಸ್ತೆ ದಾಟುತ್ತಿದ್ದ ವೃದ್ಧೆಗೆ ಡಿಕ್ಕಿಯಾಗಿದೆ. ಪರಿಣಾಮ ವೃದ್ಧೆ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಘಟನಾ ಸ್ಥಳಕ್ಕೆ ಬಿಎಂಟಿಸಿಯ ಹಿರಿಯ ಅಧಿಕಾರಿಗಳು ಹಾಗೂ ಟಾಟಾ ಸ್ಮಾರ್ಟ್ ಲಿಮಿಟೆಡ್ ಕಂಪನಿಯ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲಿಸಿದ್ದಾರೆ. ಮಡಿವಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಗೆ ಬಸ್ ಚಾಲಕನ ಅಜಾಗರೂಕತೆ ಕಾರಣವೇ ಎಂದು ಪರಿಶೀಲಿಸಲಾಗುತ್ತಿದೆ.
ಬೆಂಗಳೂರಿನಲ್ಲಿ ಚಾಲಕರ ಅಜಾಗರೂಕತೆ ಹಾಗೂ ನಿರ್ಲಕ್ಷ್ಯದಿಂದ ಬಿಎಂಟಿಸಿ ಬಸ್ಸುಗಳಿಗೆ ಅನೇಕರು ಬಲಿಯಾಗಿದ್ದಾರೆ. ಕಳೆದ ವಾರ ರೇಷ್ಮೆ ಸಂಸ್ಥೆಯ ಮೆಟ್ರೋ ಸ್ಟೇಷನ್ ಬಳಿ ಕನಕಪುರ ಮಾರ್ಗದಲ್ಲಿ ಸಂಚರಿಸುವ ಬಸ್ಸೊಂದು ದ್ವಿಚಕ್ರ ವಾಹನವೊಂದಕ್ಕೆ ಗುದ್ದಿ ಅದರ ಮೇಲೆ ಹರಿದುಹೋದ ಕಾರಣ ಪಿಲಿಯನ್ ರೈಡರ್ ಆಗಿದ್ದ ಮಹಿಳೆ ಮೃತಪಟ್ಟಿದ್ದರು. ವಾಹನ ಓಡಿಸುತ್ತಿದ್ದ ಅವರ ಅಳಿಯ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಸಾವು ಬದುಕಿನೊಂದಿಗೆ ಹೋರಾಟ ನಡೆಸುತ್ತಿದ್ದಾರೆ.
