ಉದಯವಾಹಿನಿ, ಬೆಂಗಳೂರು: ದಾರಿ ಬಿಡಿ ನಾನು ಮುಂದಕ್ಕೆ ಹೋಗಬೇಕು ಎಂದಷ್ಟೇ ಹೇಳಿ ಯಾವುದೇ ಪ್ರತಿಕ್ರಿಯೆ ನೀಡದೇ ಐಪಿಎಸ್ ಅಧಿಕಾರಿ ಪ್ರಣಬ್ ಮೊಹಂತಿ ತೆರಳಿದರು. ವಿಧಾನಸೌಧದಲ್ಲಿ ಮಧ್ಯಾಹ್ನ 12 ಗಂಟೆಗೆ ಗೃಹ ಸಚಿವ ಪರಮೇಶ್ವರ್ ನೇತೃತ್ವದಲ್ಲಿ ಫೇಕ್ ನ್ಯೂಸ್ ಮತ್ತು ಆನ್‌ಲೈನ್ ಬೆಟ್ಟಿಂಗ್ ವಿರುದ್ಧ ಕಾನೂನು ತರಲು ಮಹತ್ವದ ಸಭೆ ನಡೆಯಿತು. ಈ ಸಭೆಯಲ್ಲಿ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎ. ಸಲೀಂ, ಡಿಜಿಪಿ ಪ್ರಣಬ್ ಮೊಹಂತಿ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಹಿರಿಯ ಪೊಲೀಸ್ ಅಧಿಕಾರಿಗಳಾದ ಮುರುಗನ್, ಶರತ್ ಚಂದ್ರ ಸೇರಿದಂತೆ ಹಲವು ಮಂದಿ ಭಾಗಿಯಾಗಿದ್ದರು. ಸಭೆಯಲ್ಲಿ ಭಾಗಿಯಾದ ನಂತರ ಪ್ರಣಬ್ ಮೊಹಂತಿ ಕೊಠಡಿಯಿಂದ ಹೊರ ಬಂದರು. ಈ ವೇಳೆ ಮಾಧ್ಯಮಗಳು ಧರ್ಮಸ್ಥಳ ಬುರುಡೆ ರಹಸ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಶ್ನೆ ಕೇಳಿದವು.
ಈ ಪ್ರಶ್ನೆಗೆ ಉತ್ತರ ನೀಡದ ಮೊಹಂತಿ ಮುಂದಕ್ಕೆ ಸಾಗಿದರು. ಈ ವೇಳೆ ಮಾಧ್ಯಮಗಳು ಅವರನ್ನು ಹಿಂಬಾಲಿಸಿ ಪ್ರಶ್ನೆ ಕೇಳಿದಾಗ ಮೊಹಂತಿ ದಾರಿ ಬಿಡಿ ಎಂದಷ್ಟೇ ಹೇಳಿ ಪ್ರಕರಣದ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡದೇ ಮುಂದಕ್ಕೆ ಸಾಗಿದರು.
ಸಭೆಗೆ ಮೊದಲು ಮಾತನಾಡಿದ್ದ ಪರಮೇಶ್ವರ್, ಪ್ರಣಬ್ ಮೊಹಂತಿ ಅವರು ರಾಜ್ಯದ ಆಂತರಿಕ ಭದ್ರತಾ ವಿಭಾಗದ ಪೊಲೀಸ್ ಮಹಾನಿರ್ದೇಶಕರಾಗಿದ್ದಾರೆ. ಫೇಕ್ ನ್ಯೂಸ್ ಮತ್ತು ಆನ್‌ಲೈನ್ ಬೆಟ್ಟಿಂಗ್‌ಗೆ ಸಂಬಂಧಿಸಿದಂತೆ ಕಾನೂನು ಮಾಡುವ ಸಂಬಂಧ ಇಂದು ಸಭೆ ನಡೆಯಲಿದೆ. ಈ ಸಭೆಯಲ್ಲಿ ಭಾಗಿಯಾಗಲು ಅವರು ವಿಧಾನಸೌಧಕ್ಕೆ ಬಂದಿದ್ದಾರೆ ಎಂದು ತಿಳಿಸಿದ್ದರು
