ಉದಯವಾಹಿನಿ, ಇಸ್ಲಾಮಾಬಾದ್: ಲಾಹೋರ್‌ನಿಂದ ರಾವಲ್ಪಿಂಡಿಗೆ ಹೊರಟಿದ್ದ ಇಸ್ಲಾಮಾಬಾದ್ ಎಕ್ಸ್‌ಪ್ರೆಸ್‌ನ 10 ಭೋಗಿಗಳು ಹಳಿತಪ್ಪಿರುವ ಘಟನೆ ಶೇಖುಪುರ ಜಿಲ್ಲೆಯ ಕಲಾ ಶಾ ಕಾಕು ಎಂಬಲ್ಲಿ ನಡೆದಿದೆ. ಲಾಹೋರ್ ರೈಲು ನಿಲ್ದಾಣದಿಂದ ಹೊರಟ ಇಸ್ಲಾಮಾಬಾದ್ ಎಕ್ಸ್‌ಪ್ರೆಸ್‌ ಸುಮಾರು ಅರ್ಧ ಗಂಟೆಯ ಬಳಿಕ ಹಳಿತಪ್ಪಿದೆ. ಪರಿಣಾಮ ರೈಲಿನಲ್ಲಿದ್ದ 30 ಪ್ರಯಾಣಿಕರು ಗಾಯಗೊಂಡಿದ್ದು, ಮೂವರ ಸ್ಥಿತಿ ಗಂಭೀರವಾಗಿದೆ. ಈ ಕುರಿತು ಪಾಕಿಸ್ತಾನ ರೈಲ್ವೆ ಮಾಹಿತಿ ಹಂಚಿಕೊಂಡಿದ್ದು, ಅವಘಡ ಸಂಭವಿಸಿದ ಕೆಲವೇ ಕ್ಷಣಗಳಲ್ಲಿ ಸ್ಥಳಕ್ಕೆ ರಕ್ಷಣಾ ತಂಡಗಳು ಧಾವಿಸಿದ್ದು, ಕಾರ್ಯಾಚರಣೆ ನಡೆಸಿವೆ. ಇನ್ನೂ ಭೋಗಿಗಳ ಒಳಗೆ ಸಿಲುಕಿದ್ದ ಪ್ರಯಾಣಿಕರನ್ನು ರಕ್ಷಿಸಲು ಸಿಬ್ಬಂದಿ ರಾತ್ರಿಯಿಡಿ ಕಾರ್ಯನಿರ್ವಹಿಸಿದ್ದಾರೆ ಎಂದು ತಿಳಿಸಿದೆ.ಅವಘಡದಲ್ಲಿ 1,000ಕ್ಕೂ ಅಧಿಕ ಪ್ರಯಾಣಿಕರನ್ನು ರಕ್ಷಿಸಲಾಗಿದೆ. ಸಣ್ಣ ಪುಟ್ಟ ಗಾಯಗಳಾದವರಿಗೆ ಸ್ಥಳದಲ್ಲೇ ಪ್ರಥಮ ಚಿಕಿತ್ಸೆ ನೀಡಲಾಗಿದ್ದು, ಗಂಭೀರವಾಗಿ ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಈವರೆಗೆ ಯಾವುದೇ ಸಾವು ಸಂಭವಿಸಿಲ್ಲ ಎಂದು ವರದಿ ಮಾಡಿದೆ.
ಈ ಕುರಿತು ರೈಲ್ವೆ ಸಚಿವ ಮುಹಮ್ಮದ್ ಹನೀಫ್ ಅಬ್ಬಾಸಿ ಮಾತನಾಡಿ, ಪ್ರಯಾಣಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು, ಭವಿಷ್ಯದಲ್ಲಿ ಈ ರೀತಿಯ ಘಟನೆಗಳನ್ನು ತಡೆಯುವ ನಿಟ್ಟಿನಲ್ಲಿ ರೈಲ್ವೆ ಸೌಕರ್ಯವನ್ನು ಸುಧಾರಿಸುತ್ತೇವೆ. ಯಾವುದೇ ನಿರ್ಲಕ್ಷ್ಯ ಕಂಡುಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಾರ್ವಜನಿಕರಿಗೆ ಭರವಸೆ ನೀಡಿದ್ದಾರೆ. ಜೊತೆಗೆ ಇಸ್ಲಾಮಾಬಾದ್ ಎಕ್ಸ್‌ಪ್ರೆಸ್‌ ಹಳಿತಪ್ಪಿದ ಘಟನೆ ಸಂಬಂಧ ತನಿಖೆ ನಡೆಸಿ 7 ದಿನಗಳ ಒಳಗೆ ಸಮಗ್ರ ವರದಿ ಸಲ್ಲಿಸಲು ಸೂಚಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!