ಉದಯವಾಹಿನಿ, ಬೆಂಗಳೂರು: ಏಷ್ಯಾಕಪ್‌ ಟೂರ್ನಿ ಹತ್ತಿರ ಬರುತ್ತಿದ್ದಂತೆ ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಮತ್ತು ಫಿಟ್‌ನೆಸ್‌ ಕಳೆದುಕೊಂಡಿರುವ ಟೀಮ್‌ ಇಂಡಿಯಾದ ಆಟಗಾರರು ಮರಳಿ ಫಿಟ್ನೆಸ್ ಪಡೆದುಕೊಳ್ಳುವ ನಿಟ್ಟಿನಲ್ಲಿ ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (ಎನ್‌ಸಿಎ) ಕಠಿಣ ತರಬೇತಿಗೆ ಹಾಜರಾಗಿದ್ದಾರೆ.
ಭಾರತದ ಟಿ20 ನಾಯಕ ಸೂರ್ಯಕುಮಾರ್ ಯಾದವ್, ಶ್ರೇಯಸ್‌ ಅಯ್ಯರ್‌, ಮೊಹಮ್ಮದ್‌ ಶಮಿ ಸೇರಿದಂತೆ ಐಪಿಎಲ್‌ ಬಳಿಕ ವಿಶ್ರಾಂತಿಯಲ್ಲಿದ್ದು ಅನೇಕ ಸ್ಟಾರ್‌ ಆಟಗಾರರು ಎನ್‌ಸಿಎಯಲ್ಲಿ ತರಬೇತಿ ಆರಂಭಿಸಿದ್ದಾರೆ. ಸೆಪ್ಟೆಂಬರ್ 9 ರಂದು ಆರಂಭವಾಗಲಿರುವ 2025 ರ ಏಷ್ಯಾಕಪ್‌ಗೆ ಮುಂಚಿತವಾಗಿ ಪೂರ್ಣ ಫಿಟ್ನೆಸ್ ಅನ್ನು ಮರಳಿ ಪಡೆಯುವತ್ತ ಕೆಲಸ ಮಾಡುತ್ತಿದ್ದಾರೆ.

ಜೂನ್‌ನಲ್ಲಿ ಸೂರ್ಯಕುಮಾರ್ ಯಾದವ್ ಅವರಿಗೆ ‘ಸ್ಪೋರ್ಟ್ಸ್ ಹರ್ನಿಯಾ’ ನೋವಿಗೆ ಸಂಬಂಧಿಸಿದಂತೆ ಜರ್ಮನಿಯ ಮ್ಯೂನಿಚ್‌ನಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಸದ್ಯ ಚೇತರಿಕೆಯ ಹಾದಿಯಲ್ಲಿರುವ ಅವರು ದುಲೀಪ್ ಟ್ರೋಫಿಯಿಂದ ಹೊರಗುಳಿದಿದ್ದಾರೆ. ಪಶ್ಚಿಮ ವಲಯದ ಆಯ್ಕೆದಾರರು ಅವರನ್ನು ತಮ್ಮ 15 ಸದಸ್ಯರ ತಂಡದಲ್ಲಿ ಸೇರಿಸಿಕೊಳ್ಳದಿರಲು ನಿರ್ಧರಿಸಿದ್ದರು ಆದರೆ ಅವರು ಅಲಭ್ಯರಾಗುದಾಗಿ ತಿಳಿಸಿದ್ದಾರೆ. ಹೀಗಾಗಿ ಶಾರ್ದುಲ್ ಠಾಕೂರ್‌ಗೆ ನಾಯಕತ್ವ ನೀಡಲಾಗಿದೆ.

ಸೂರ್ಯಕುಮಾರ್‌ ಯಾದವ್‌ ಏಷ್ಯಾ ಕಪ್‌ಗೂ ಮುನ್ನ ತಮ್ಮ ಫಿಟ್ನೆಸ್ ಸಾಬೀತು ಪಡಿಸಬೇಕಿದೆ. ಇತ್ತೀಚೆಗೆ ಮುಕ್ತಾಯ ಕಂಡಿದ್ದ ಐಪಿಎಲ್‌ 18ನೇ ಆವೃತ್ತಿಯಲ್ಲಿ ಸೂರ್ಯಕುಮಾರ್‌ ಮುಂಬೈ ಇಂಡಿಯನ್ಸ್ ಪರ 717 ರನ್ ಗಳಿಸುವ ಮೂಲಕ ಅತ್ಯುತ್ತಮ ಪ್ರದರ್ಶನ ನೀಡಿದ್ದರು.
34 ವರ್ಷದ ವೇಗಿ ಶಮಿ ಹೆಚ್ಚು ಸಮಯ ಬೌಲಿಂಗ್ ಮಾಡಲು ಸಾಧ್ಯವಾಗುವುದಿಲ್ಲ ಎಂದು ಬಿಸಿಸಿಐ ವೈದ್ಯಕೀಯ ತಂಡವು ಭಾರತೀಯ ಮಂಡಳಿಗೆ ತಿಳಿಸಿದ ನಂತರ, ಆಂಡರ್ಸನ್-ತೆಂಡೂಲ್ಕರ್ ಟ್ರೋಫಿಗಾಗಿ ಶಮಿಯನ್ನು ಇಂಗ್ಲೆಂಡ್‌ ಸರಣಿಗೆ ಆಯ್ಕೆ ಮಾಡಿರಲಿಲ್ಲ. ಇದೀಗ ಅವರು ಕಳೆದುಕೊಂಡಿರುವ ಫಾರ್ಮ್‌ ಮತ್ತೆ ಕಂಡುಕೊಳ್ಳಲು ಹಾಗೂ ಭಾರತ ತಂಡದ ಪರ ಆಡಲು, ದೇಶೀಯ ಕ್ರಿಕೆಟ್‌ ಟೂರ್ನಿಯತ್ತ ಮುಖ ಮಾಡಿದಾರೆ. ಇಶಾನ್‌ ಕಿಶಾನ್‌ ನಾಯಕನಾಗಿರುವ ಪೂರ್ವ ವಲಯ ತಂಡದ ಪರ ದುಲೀಪ್‌ ಟ್ರೋಫಿ ಆಡಲಿದ್ದಾರೆ. ದುಲೀಪ್‌ ಟ್ರೋಫಿ ಟೂರ್ನಿಗೆ ಆಗಸ್ಟ್‌ 28 ರಂದು ಬೆಂಗಳೂರಿನಲ್ಲಿ ಚಾಲನೆ ಸಿಗಲಿದೆ.

Leave a Reply

Your email address will not be published. Required fields are marked *

error: Content is protected !!