ಉದಯವಾಹಿನಿ, ನವದೆಹಲಿ: ರಿಲಯನ್ಸ್‌ ಒಡೆತನದ ಫುಟ್ಬಾಲ್ ಸ್ಪೋರ್ಟ್ಸ್‌ ಡೆವಲಪ್‌ಮೆಂಟ್‌(ಎಫ್‌ಎಸ್‌ಡಿಎಲ್‌) ಮತ್ತು ಅಖಿಲ ಭಾರತೀಯ ಫುಟ್ಬಾಲ್ ಫೆಡರೇಶನ್(ಎಐಎಫ್‌ಎಫ್) ಬಿಕ್ಕಟ್ಟಿನಿಂದಾಗಿ ಇಂಡಿಯನ್‌ ಸೂಪರ್ ಲೀಗ್‌ ಭವಿಷ್ಯ ಅತಂತ್ರವಾಗಿದೆ. ಇದೇ ವೇಳೆ ಬೆಂಗಳೂರು ಎಫ್‌ಸಿ ತನ್ನ ಆಟಗಾರರ ವೇತನವನ್ನು ಅನಿರ್ದಿಷ್ಟಾವಧಿಗೆ ತಡೆಹಿಡಿದಿದೆ.

ಈ ಬಗ್ಗೆ ಬಿಎಫ್‌ಸಿ ಅಧಿಕೃತ ಘೋಷಣೆ ಮಾಡಿದ್ದು, ‘ಐಎಸ್‌ಎಲ್‌ ಭವಿಷ್ಯದ ಅತಂತ್ರವಾಗಿರುವುದರಿಂದ ನಾವು ಕಠಿಣ ನಿರ್ಧಾರ ಕೈಗೊಳ್ಳಬೇಕಾಗಿದೆ. ಮುಖ್ಯ ತಂಡದ ಆಟಗಾರರ ಸಂಬಳವನ್ನು ಅನಿರ್ದಿಷ್ಟಾವಧಿಗೆ ಅಮಾನತುಗೊಳಿಸಲಾಗಿದೆ. ನಮಗೆ ಇದರ ಹೊರತಾಗಿ ಬೇರೆ ಆಯ್ಕೆ ಇಲ್ಲ. ಆಟಗಾರರು, ಸಿಬ್ಬಂದಿ, ಅವರ ಕುಟುಂಬಸ್ಥರು ನಮ್ಮ ಆಧ್ಯತೆಯಾಗಿದ್ದು, ಫ್ರಾಂಚೈಸಿಯು ಅವರ ಜತೆ ಸಂಪರ್ಕದಲ್ಲಿದೆ’ ಎಂದಿದೆ. ಹೀಗಾಗಿ ಸುನಿಲ್‌ ಚೆಟ್ರಿ ಸೇರಿದಂತೆ ಬಿಎಫ್‌ಸಿಯ ಆಟಗಾರರಿಗೆ ಈ ಋತುವಿನಲ್ಲಿ ವೇತನ ಸಿಗುವುದಿಲ್ಲ.
ಟೂರ್ನಿ ಆಯೋಜಕ ಸಂಸ್ಥೆ ಹಾಗೂ ಅಖಿಲ ಭಾರತ ಫುಟ್ಬಾಲ್‌ ಫೆಡರೇಶನ್ (ಎಐಎಫ್‌ಎಫ್‌) ನಡುವಿನ ಗುತ್ತಿಗೆ ಒಪ್ಪಂದ ನವೀಕರಣಗೊಳ್ಳದ ಕಾರಣ, 2025-26ರ ಐಎಸ್‌ಎಲ್‌ ಟೂರ್ನಿಯನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ.

ಟೂರ್ನಿ ಆಯೋಜಕರಾದ ರಿಲಯನ್ಸ್‌ ಸಂಸ್ಥೆಯ ಭಾಗವಾಗಿರುವ ಫುಟ್ಬಾಲ್‌ ಸ್ಪೋರ್ಟ್ಸ್‌ ಡೆವಲಪ್‌ಮೆಂಟ್‌ ಲಿ. (ಎಫ್‌ಎಸ್‌ಡಿಎಲ್‌) ಹಾಗೂ ಎಐಎಫ್‌ಎಫ್‌ ನಡುವಿನ ಒಪ್ಪಂದ ಡಿ.8, 2025ರಂದು ಕೊನೆಗೊಳ್ಳಲಿದೆ. ಸಾಮಾನ್ಯವಾಗಿ ಐಎಸ್‌ಎಲ್‌ ಟೂರ್ನಿಯು ಸೆಪ್ಟೆಂಬರ್‌ನಿಂದ ಏಪ್ರಿಲ್‌ ವರೆಗೂ ನಡೆಯಲಿರುವ ಕಾರಣ, ಗುತ್ತಿಗೆ ನವೀಕರಣಗೊಳ್ಳದೆ ಟೂರ್ನಿ ಆಯೋಜಿಸುವ ಸ್ಥಿತಿಯಲ್ಲಿ ತಾನಿಲ್ಲ ಎಂದು ಎಫ್‌ಎಸ್‌ಡಿಎಲ್‌ ಎಲ್ಲಾ ಫ್ರಾಂಚೈಸಿಗಳಿಗೂ ಮಾಹಿತಿ ನೀಡಿದೆ.

ಇಂಡಿಯನ್‌ ಸೂಪರ್‌ ಲೀಗ್‌(ಐಎಸ್‌ಎಸ್) ಅನಿರ್ದಿಷ್ಟಾವಧಿಗೆ ಸ್ಥಗಿತಗೊಂಡಿರುವ ಬಗ್ಗೆ ಚೆಟ್ರಿ ಸಾಮಾಜಿಕ ತಾಣಗಳಲ್ಲಿ ಇತ್ತೀಚೆಗೆ ಪ್ರತಿಕ್ರಿಯೆ ನೀಡಿದ್ದರು. ‘ಭಾರತದ ಫುಟ್ಬಾಲ್ ವ್ಯವಸ್ಥೆಯಲ್ಲಿರುವ ಎಲ್ಲರೂ ನೋವು, ಭಯ, ಆತಂಕದಲ್ಲಿದ್ದಾರೆ. ದೇಶದ ಈಗಿನ ಫುಟ್ಬಾಲ್‌ ಸ್ಥಿತಿಗತಿ ಕಳವಳಕಾರಿ. ಐಎಸ್‌ಎಲ್‌ ಸ್ಥಗಿತಗೊಂಡಿರುವ ಬಗ್ಗೆ ಆಟಗಾರರು, ಕೋಚ್‌ಗಳು, ಸಿಬ್ಬಂದಿ, ಫಿಸಿಯೋ ಎಲ್ಲರೂ ನನ್ನಲ್ಲಿ ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಈ ಬಿರುಗಾಳಿಯನ್ನು ನಾವು ಒಟ್ಟಿಗೆ ಎದುರಿಸುತ್ತೇವೆʼ ಎಂದು ತಿಳಿಸಿದ್ದರು.

Leave a Reply

Your email address will not be published. Required fields are marked *

error: Content is protected !!