ಉದಯವಾಹಿನಿ, ಲಖನೌ: ಉತ್ತರ ಪ್ರದೇಶದ ಶಾಮ್ಲಿಯ ಠಾಣಾ ಭವನ ವ್ಯಾಪ್ತಿಯ ಮಂತಿ ಹಸನ್‌ಪುರ ಗ್ರಾಮದ ಶನಿ ಮಂದಿರದಲ್ಲಿ ಬಾಬಾ ಬೆಂಗಾಲಿ ಉರ್ಫ್ ಬಾಲಕ್‌ನಾಥ್ ಎಂಬ ನಕಲಿ ಗುರುತಿನಡಿ ಎರಡು ವರ್ಷಗಳಿಂದ ವಾಸಿಸುತ್ತಿದ್ದ 55 ವರ್ಷದ ಪಶ್ಚಿಮ ಬಂಗಾಳದ ಇಮಾಮುದ್ದೀನ್ ಅನ್ಸಾರಿ ಎಂಬ ಮುಸ್ಲಿಂ ವ್ಯಕ್ತಿಯನ್ನು ಬಂಧಿಸಲಾಗಿದೆ. ಠಾಣಾ ಭವನ ಪೊಲೀಸರಿಗೆ ಆತನ ನಿಜವಾದ ಗುರುತಿನ ಬಗ್ಗೆ ಮಾಹಿತಿ ದೊರೆತ ನಂತರ ವಿಚಾರಣೆಗಾಗಿ ವಶಕ್ಕೆ ಪಡೆಯಲಾಯಿತು.

ಶೋಧದ ವೇಳೆ, ಪೊಲೀಸರು ಇಮಾಮುದ್ದೀನ್‌ನಿಂದ ಮೂರು ಆಧಾರ್ ಕಾರ್ಡ್‌ಗಳು ಮತ್ತು ಒಂದು ಪ್ಯಾನ್ ಕಾರ್ಡ್‌ ವಶಪಡಿಸಿಕೊಂಡಿದ್ದಾರೆ. ಒಂದು ಆಧಾರ್ ಕಾರ್ಡ್‌ನಲ್ಲಿ ‘ಬಂಗಾಲಿ ನಾಥ್’ ಎಂಬ ಹೆಸರು ಮತ್ತು ಸಹರಾನ್‌ಪುರದ ದೇವಸ್ಥಾನದ ವಿಳಾಸವಿತ್ತು. ಇತರ ಎರಡು ಆಧಾರ್ ಕಾರ್ಡ್‌ಗಳು ಮತ್ತು ಪ್ಯಾನ್ ಕಾರ್ಡ್‌ನಲ್ಲಿ ಆತನ ನಿಜವಾದ ಹೆಸರು ಇಮಾಮುದ್ದೀನ್ ಅನ್ಸಾರಿ ಮತ್ತು ಪಶ್ಚಿಮ ಬಂಗಾಳದ ಅಲಿಪುರದ್ವಾರ ಜಿಲ್ಲೆಯ ವಿಳಾಸವಿತ್ತು. ಶಾಮ್ಲಿಯ ಎಸ್‌ಪಿ ರಾಮ್‌ಸೇವಕ್ ಗೌತಮ್, “ನಕಲಿ ದಾಖಲೆಗಳನ್ನು ತಯಾರಿಸಿದ ಮತ್ತು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದಡಿ ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಕೈರಾನಾ ಕೋರ್ಟ್‌ನಲ್ಲಿ ಆತನನ್ನು ಹಾಜರುಪಡಿಸಿ, 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ” ಎಂದು ತಿಳಿಸಿದ್ದಾರೆ.
ಪೊಲೀಸರು ಇಮಾಮುದ್ದೀನ್‌ನ ಹಿನ್ನೆಲೆ ಮತ್ತು ವಿಳಾಸವನ್ನು ಖಚಿತಪಡಿಸಲು ಪಶ್ಚಿಮ ಬಂಗಾಳಕ್ಕೆ ತಂಡವನ್ನು ಕಳುಹಿಸಿದ್ದಾರೆ. ಆತನಿಗೆ ಈ ಹಿಂದೆ ಯಾವುದೇ ಅಪರಾಧದ ದಾಖಲೆ ಇದೆಯೇ ಎಂಬುದನ್ನು ಪರಿಶೀಲಿಸಲಾಗುವುದು ಮತ್ತು ನಕಲಿ ಆಧಾರ್ ಕಾರ್ಡ್ ಹೇಗೆ ಪಡೆಯಲಾಯಿತು ಎಂಬುದನ್ನು ತನಿಖೆ ಮಾಡಲಾಗುತ್ತಿದೆ. ಆತನ ಹೆಸರನ್ನು ಅಧಿಕೃತ ದಾಖಲೆಗಳಲ್ಲಿ ಬದಲಾಯಿಸಲು ಇತರ ವ್ಯಕ್ತಿಗಳು ಸೇರಿಕೊಂಡಿದ್ದಾರಾ ಎಂಬುದನ್ನೂ ಪೊಲೀಸರು ಪರಿಶೀಲಿಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!