ಉದಯವಾಹಿನಿ, ಒಟ್ಟಾವಾ: ಕೆನಡಾದ ಸರ್ರೆಯಲ್ಲಿ ಖಲಿಸ್ತಾನಿ ಸಂಘಟನೆ ಸಿಖ್ಸ್ ಫಾರ್ ಜಸ್ಟೀಸ್ (SFJ) ಗುರುನಾನಕ್ ಸಿಖ್ ಗುರುದ್ವಾರ ದೇವಾಲಯದ ಜೊತೆಗೆ ‘ಖಲಿಸ್ತಾನದ ರಾಯಭಾರ ಕಚೇರಿ’ಯನ್ನು ಸ್ಥಾಪಿಸಿದೆ ಎಂದು ತಿಳಿದು ಬಂದಿದೆ. ಖಾಲಿಸ್ತಾನ್ ಗಣರಾಜ್ಯ’ ಎಂಬ ಫಲಕವನ್ನು ಹೊಂದಿರುವ ರಾಯಭಾರ ಕಚೇರಿಯನ್ನು ಗುರುದ್ವಾರದ ಆವರಣದಲ್ಲಿರುವ ಕಟ್ಟಡದಲ್ಲಿ ತೆರೆಯಲಾಗಿದೆ. ರಾಯಭಾರ ಕಚೇರಿ ಸ್ಥಾಪಿಸಲಾಗಿರುವ ಕಟ್ಟಡವನ್ನು ಬ್ರಿಟಿಷ್ ಕೊಲಂಬಿಯಾ ಸರ್ಕಾರ ಒದಗಿಸಿದ ನಿಧಿಯಿಂದ ನಿರ್ಮಿಸಲಾಗಿದೆ ಎಂದು ಮೂಲಗಳು ತಿಳಿಸಿದೆ.
ಬ್ರಿಟಿಷ್ ಕೊಲಂಬಿಯಾ ಸರ್ಕಾರವು ಇತ್ತೀಚೆಗೆ ಕಟ್ಟಡದಲ್ಲಿ ಲಿಫ್ಟ್ ಅಳವಡಿಸಲು $150,000 ನೀಡಿದೆ ಎಂದು ತಿಳಿದು ಬಂದಿದೆ. ಈ ವರ್ಷದ ಜೂನ್‌ನಲ್ಲಿ, ಕೆನಡಾದ ಉನ್ನತ ಗುಪ್ತಚರ ಸಂಸ್ಥೆ, ಕೆನಡಿಯನ್ ಸೆಕ್ಯುರಿಟಿ ಇಂಟೆಲಿಜೆನ್ಸ್ ಸರ್ವಿಸ್ (CSIS), ಖಲಿಸ್ತಾನಿ ಉಗ್ರಗಾಮಿಗಳು ಭಾರತವನ್ನು ಗುರಿಯಾಗಿಸಿಕೊಂಡು ಹಿಂಸಾಚಾರವನ್ನು ಉತ್ತೇಜಿಸಲು, ನಿಧಿಸಂಗ್ರಹಿಸಲು ಕೆನಡಾದಲ್ಲಿದ್ದುಕೊಂಡೇ ಸಂಚು ರೂಪಿಸಿತ್ತು ಎಂದು ತಿಳಿಸಿತ್ತು. ಖಾಲಿಸ್ತಾನಿ ಉಗ್ರಗಾಮಿಗಳು ಮುಖ್ಯವಾಗಿ ಭಾರತದಲ್ಲಿ ಹಿಂಸಾಚಾರದ ಪ್ರಚಾರ, ನಿಧಿಸಂಗ್ರಹಣೆ ಅಥವಾ ಯೋಜನೆಗಾಗಿ ಕೆನಡಾವನ್ನು ನೆಲೆಯಾಗಿ ಬಳಸುತ್ತಲೇ ಇದ್ದಾರೆ” ಎಂದು ಏಜೆನ್ಸಿಯ ಇತ್ತೀಚಿನ ವರದಿ ಸ್ಪಷ್ಟವಾಗಿ ಹೇಳಿದೆ.
ಗುಪ್ತಚರ ಇಲಾಖೆ ಮಾಹಿತಿ ನೀಡಿದಂತೆ,1980 ರ ದಶಕದಿಂದಲೂ, ಕೆನಡಾದಲ್ಲಿರುವ ಖಾಲಿಸ್ತಾನಿ ಉಗ್ರಗಾಮಿಗಳು ಭಾರತದ ಪಂಜಾಬ್‌ನಲ್ಲಿ ಪ್ರತ್ಯೇಕ ಖಾಲಿಸ್ತಾನ ರಾಷ್ಟ್ರವನ್ನು ರಚಿಸಲು ಹಿಂಸಾತ್ಮಕ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ಈ ಉಗ್ರಗಾಮಿಗಳು ಕೆನಡಾವನ್ನು ತಮ್ಮ ಚಟುವಟಿಕೆಗಳ ನೆಲೆಯನ್ನಾಗಿ ಮಾಡಿಕೊಳ್ಳುತ್ತಿದ್ದಾರೆ. ಅಲ್ಲಿಂದ ಅವರು ಹಿಂಸೆಯನ್ನು ಉತ್ತೇಜಿಸುತ್ತಾರೆ, ನಿಧಿ ಸಂಗ್ರಹಿಸುತ್ತಾರೆ ಮತ್ತು ದಾಳಿಗಳನ್ನು ಯೋಜಿಸುತ್ತಾರೆ. 2024 ರಲ್ಲಿ ಕೆನಡಾದಲ್ಲಿ ಅಂತಹ ಯಾವುದೇ ಹಿಂಸಾತ್ಮಕ ಘಟನೆ ನಡೆದಿಲ್ಲವಾದರೂ, ಈ ಉಗ್ರಗಾಮಿಗಳ ಚಟುವಟಿಕೆಗಳು ಕೆನಡಾದ ರಾಷ್ಟ್ರೀಯ ಭದ್ರತೆ ಮತ್ತು ಭಾರತದ ಹಿತಾಸಕ್ತಿಗಳಿಗೆ ಮಾರಕವಾಗಿದೆ ಎಂದು ಬಹಿರಂಗಪಡಿಸಲಾಗಿತ್ತು.
