ಉದಯವಾಹಿನಿ, ನವದೆಹಲಿ: ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವಣ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಹಿರಿಯ ವೇಗಿ ಜಸ್‌ಪ್ರೀತ್ ಬುಮ್ರಾ ನಿರೀಕ್ಷಿತ ಬೌಲಿಂಗ್ ಪ್ರದರ್ಶನವನ್ನು ತೋರುವಲ್ಲಿ ವಿಫಲರಾಗಿದ್ದಾರೆ ಎಂದು ಟೀಮ್ ಇಂಡಿಯಾ ಮಾಜಿ ಆಲ್‌ರೌಂಡರ್ ಇರ್ಫಾನ್ ಪಠಾಣ್ ಹೇಳಿದ್ದಾರೆ. ಅಂದ ಹಾಗೆ ಆಗಸ್ಟ್ 4ರಂದು ಭಾರತ ತಂಡ ಐದನೇ ಹಾಗೂ ಟೆಸ್ಟ್ ಸರಣಿಯ ಕೊನೆಯ ಪಂದ್ಯದಲ್ಲಿ 6 ರನ್ ರೋಚಕ ಗೆಲುವು ಸಾಧಿಸಿತ್ತು. ಆ ಮೂಲಕ ಈ ಸರಣಿಯಲ್ಲಿ 2-2 ಅಂತರದಲ್ಲಿ ಡ್ರಾ ಮಾಡಿಕೊಂಡಿತ್ತು. ಈ ಪಂದ್ಯದಲ್ಲಿ ಜಸ್‌ಪ್ರೀತ್ ಬುಮ್ರಾ ಆಡಿರಲಿಲ್ಲ. ವರ್ಕ್‌ಲೋಡ್ ಮ್ಯಾನೇಜ್‌ಮೆಂಟ್ ಕಾರಣ ಅವರು ಈ ಸರಣಿಯಲ್ಲಿ ಕೇವಲ ಮೂರು ಪಂದ್ಯಗಳನ್ನು ಮಾತ್ರ ಆಡಿದ್ದರು.
ತಮ್ಮ ಅಧೀಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಿದ ವಿಡಿಯೊದಲ್ಲಿ ಮಾತನಾಡಿದ ಇರ್ಫಾನ್ ಪಠಾಣ್, ಜಸ್‌ಪ್ರೀತ್ ಬುಮ್ರಾ ಅವರ ಬೌಲಿಂಗ್ ಪ್ರದರ್ಶನದ ಬಗ್ಗೆ ಚರ್ಚೆ ನಡೆಸಿದ್ದಾರೆ. ಇದೇ ವೇಳೆ ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿನ ಘಟನೆಯೊಂದನ್ನು ಅವರು ಉದಾಹರಣೆಗೆ ತೆಗೆದುಕೊಂಡಿದ್ದಾರೆ. ಅವರು ಐದು ಓವರ್ ಸ್ಪೆಲ್ ಮುಗಿಸಿದ್ದರು. ಆದರೆ, ಆಗ ತಾನೇ ಕ್ರೀಸ್‌ಗೆ ಜೋ ರೂಟ್ ಬಂದಿದ್ದರು. ಈ ವೇಳೆ ಜಸ್‌ಪ್ರೀತ್ ಬುಮ್ರಾ ಆರನೇ ಓವರ್ ಬೌಲ್ ಮಾಡಬಹುದಾಗಿತ್ತು ಎಂದು ಪಠಾಣ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಲಾರ್ಡ್ಸ್ ಟೆಸ್ಟ್ ಪಂದ್ಯದಲ್ಲಿ ಕೆಲವೊಮ್ಮೆ ಜಸ್‌ಪ್ರೀತ್ ಬುಮ್ರಾ ಆರನೇ ಓವರ್ ಬೌಲ್ ಮಾಡಬೇಕಾದ ಅಗತ್ಯವಿತ್ತು. ಕಾಮೆಂಟರಿ ವೇಳೆಯೂ ಈ ಬಗ್ಗೆ ನಾನು ಮಾತನಾಡಿದ್ದೆ. ಜೋ ರೂಟ್ ಅವರನ್ನು ಜಸ್‌ಪ್ರೀತ್ ಬುಮ್ರಾ 11 ಬಾರಿ ಔಟ್ ಮಾಡಿದ್ದಾರೆ. ಈ ಪಂದ್ಯದಲ್ಲಿ ಬುಮ್ರಾ ಐದು ಓವರ್‌ಗಳ ಸ್ಪೆಲ್ ಅನ್ನು ಬೌಲ್ ಮಾಡಿದ್ದರು. ಅವರು ಇನ್ನೂ ಇನ್ನೊಂದು ಓವರ್ ಬೌಲ್ ಮಾಡಿ ಎದುರಾಳಿ ಬ್ಯಾಟ್ಸ್‌ಮನ್ ಮೇಲೆ ಹೆಚ್ಚಿನ ಒತ್ತಡ ಹೇರಬೇಕಾಗಿತ್ತು,” ಎಂದು ಹೇಳಿದ್ದಾರೆ.
“ಅವರು ಆಡಿದಾಗಲೆಲ್ಲಾ, ಅವರು ಉತ್ತಮ ಪ್ರದರ್ಶನವನ್ನು ತೋರಿದ್ದಾರೆ. ಅವರು ಐದು ವಿಕೆಟ್ ಸಾಧನೆ ಮಾಡಿದ್ದಾರೆ ಹಾಗೂ ಲಾರ್ಡ್ಸ್ ಅಂಗಣದ ಬೋರ್ಡ್‌ನಲ್ಲಿ ಬುಮ್ರಾ ಹೆಸರಿದೆ. ಜಸ್‌ಪ್ರೀತ್ ಬುಮ್ರಾ ಅವರು ಅವರು ವಿಶ್ವದ ನಂ 1 ಬೌಲರ್ ಆಗಿದ್ದಾರೆ, ಹಾಗಾಗಿ ಅವರ ಮೇಲೆ ಸಾಕಷ್ಟು ನಿರೀಕ್ಷೆ ಇರುವುದು ಸಾಮಾನ್ಯ.
