ಉದಯವಾಹಿನಿ, ನವದೆಹಲಿ: ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹಲವು ಜನ ತಮ್ಮ ಪ್ರಾಣವವನ್ನು ಅರ್ಪಿಸಿದ್ದಾರೆ. ಗಾಂಧೀಜಿ ನೇತೃತ್ವದಲ್ಲಿ ಅಹಿಂಸಾತ್ಮಕ ಹೋರಾಟದ ನಡುವೆಯೂ ಹಲವು ದುರಂತಗಳು ಸಂಭವಿಸಿವೆ. ಅಂತಹ ಘನಟಗಳಲ್ಲಿ ಚೌರಿ ಚೌರಾ (Chauri Chaura) ಕೂಡ ಒಂದು. 1922ರಲ್ಲಿ ಭಾರತದ ಸ್ವಾತಂತ್ರ್ಯ ಸಂಗ್ರಾಮ ತೀವ್ರಗೊಂಡಿತ್ತು. ಮಹಾತ್ಮ ಗಾಂಧಿ ಜವಾಹರಲಾಲ್ ನೆಹರು ಮತ್ತು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ನಾಯಕರ ನೇತೃತ್ವದಲ್ಲಿ ಜನರು ಬ್ರಿಟಿಷ್ ಆಳ್ವಿಕೆಯಿಂದ ಸಂಪೂರ್ಣ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದರು. ಗಾಂಧಿಯವರ ಸತ್ಯಾಗ್ರಹದ ಅಹಿಂಸಾತ್ಮಕ ಚಳವಳಿಯು ರೌಲತ್ ಕಾಯ್ದೆಯಂತಹ ದಮನಕಾರಿ ಕಾನೂನುಗಳನ್ನು ವಿರೋಧಿಸಿ ಸ್ವರಾಜ್ ಸಾಧನೆಗೆ ದಾರಿಮಾಡಿತ್ತು. ಆದರೆ, ಚೌರಿ ಚೌರಾ ಘಟನೆಯು ಈ ಅಹಿಂಸಾತ್ಮಕ ಹೋರಾಟದಲ್ಲಿ ಜನರ ಆಕ್ರೋಶವನ್ನು ಬಿಚ್ಚಿಟ್ಟಿತು.
ಘಟನೆಯ ಹಿನ್ನೆಲೆ
1920ರಿಂದ ಗಾಂಧಿಯವರ ನೇತೃತ್ವದಲ್ಲಿ ದೇಶವ್ಯಾಪಿ ಅಸಹಕಾರ ಚಳವಳಿಯು ಆರಂಭವಾಗಿತ್ತು. ಈ ಚಳವಳಿಯ ಭಾಗವಾಗಿ, ಫೆಬ್ರವರಿ 2, 1922 ರಂದು, ಗೋರಖ್‌ಪುರ ಜಿಲ್ಲೆಯ ಚೌರಿ ಚೌರಾದ ಗೌರಿ ಬಜಾರ್‌ನಲ್ಲಿ, ಭಗವಾನ್ ಅಹಿರ್ ಎಂಬ ನಿವೃತ್ತ ಬ್ರಿಟಿಷ್ ಭಾರತೀಯ ಸೈನಿಕನ ನೇತೃತ್ವದಲ್ಲಿ ಸ್ವಯಂಸೇವಕರು ಆಹಾರದ ಬೆಲೆ ಏರಿಕೆ ಮತ್ತು ಮದ್ಯ ಮಾರಾಟದ ವಿರುದ್ಧ ಪ್ರತಿಭಟನೆ ನಡೆಸಿದರು. ಆದರೆ, ದರೋಗ ಗುಪ್ತೇಶ್ವರ್ ಸಿಂಗ್ ನೇತೃತ್ವದ ಪೊಲೀಸರು ಪ್ರತಿಭಟನಾಕಾರರನ್ನು ಹಿಮ್ಮೆಟ್ಟಿಸಿ, ಹಲವು ನಾಯಕರನ್ನು ಬಂಧಿಸಿ ಚೌರಿ ಚೌರಾ ಪೊಲೀಸ್ ಠಾಣೆಯಲ್ಲಿ ಕೂಡಿಹಾಕಿದರು.
ಘಟನೆಯ ವಿವರ
ಫೆಬ್ರವರಿ 4, 1922 ರಂದು, ಸುಮಾರು 2,000-2,500 ಪ್ರತಿಭಟನಾಕಾರರು ಮದ್ಯದಂಗಡಿಯನ್ನು ತಡೆಗಟ್ಟಲು ಮಾರ್ಕೆಟ್ ಲೇನ್‌ಗೆ ಜಮಾಯಿಸಿದರು. ಬ್ರಿಟಿಷ್ ವಿರೋಧಿ ಘೋಷಣೆಗಳೊಂದಿಗೆ ಮೆರವಣಿಗೆ ನಡೆಸಿದವರನ್ನು ತಡೆಯಲು ಸಶಸ್ತ್ರ ಪೊಲೀಸರನ್ನು ಕಳುಹಿಸಲಾಯಿತು. ಗುಪ್ತೇಶ್ವರ್ ಸಿಂಗ್ ತಮ್ಮ 15 ಅಧಿಕಾರಿಗಳಿಗೆ ಗಾಳಿಯಲ್ಲಿ ಎಚ್ಚರಿಕೆ ಗುಂಡು ಹಾರಿಸಲು ಆದೇಶಿಸಿದರು. ಆದರೆ, ಇದು ಜನರ ಆಕ್ರೋಶವನ್ನು ಉಲ್ಬಣಗೊಳಿಸಿತು. ಜನರು ಕಲ್ಲು ಎಸೆಯಲಾರಂಭಿಸಿದರು. ಪರಿಸ್ಥಿತಿ ಕೈಮೀರಿದಾಗ, ಸಬ್-ಇನ್ಸ್‌ಪೆಕ್ಟರ್ ಪೃಥ್ವಿ ಪಾಲ್ ಜನಸಂದಣಿಯ ಮೇಲೆ ನೇರವಾಗಿ ಗುಂಡು ಹಾರಿಸಲು ಆದೇಶಿಸಿದರು, ಇದರಿಂದ ಮೂರು ಜನರು ಮೃತಪಟ್ಟರು ಮತ್ತು ಹಲವರು ಗಾಯಗೊಂಡರು.
ಹಿಂಸಾತ್ಮಕ ತಿರುವು: ಸಂಖ್ಯೆಯಲ್ಲಿ ಕಡಿಮೆಯಿದ್ದ ಪೊಲೀಸರನ್ನು ಠಾಣೆಗೆ ಹಿಮ್ಮೆಟ್ಟಿಸಲಾಯಿತು. ಮೊದಲೇ ಕೆರಳಿದ್ದ ಜನರು ಪೊಲೀಸ್ ಚೌಕಿಗೆ ಬೆಂಕಿ ಹಚ್ಚಿದರು. ಒಳಗಿದ್ದ ಗುಪ್ತೇಶ್ವರ್ ಸಿಂಗ್ ಸೇರಿದಂತೆ 22 ಅಥವಾ 23 ಪೊಲೀಸರು ಘಟನೆಯಲ್ಲಿ ಮೃತಪಟ್ಟರು. ಹೆಚ್ಚಿನ ಜನರು ಜೀವಂತವಾಗಿ ಸುಟ್ಟುಹೋದರೆ, ಕೆಲವರನ್ನು ಬಾಗಿಲ ಬಳಿ ಕೊಂದು ಬೆಂಕಿಗೆ ಎಸೆಯಲಾಯಿತು.
ಈ ಹಿಂಸೆಯಿಂದ ಆಘಾತಗೊಂಡ ಗಾಂಧಿಯವರು, ಜನರು ಸ್ವಾತಂತ್ರ್ಯಕ್ಕೆ ಸಿದ್ಧರಿಲ್ಲ ಎಂದು ಭಾವಿಸಿ, ಐದು ದಿನಗಳ ಉಪವಾಸವನ್ನು ಕೈಗೊಂಡರು. ಬ್ರಿಟಿಷ್ ಆಡಳಿತವು ಯುದ್ಧ ಕಾನೂನು ಜಾರಿಗೊಳಿಸಿ, ದಾಳಿಗಳನ್ನು ನಡೆಸಿತು. 19 ಪ್ರತಿಭಟನಾಕಾರರಿಗೆ ಮರಣದಂಡನೆ ಮತ್ತು 14 ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಯಿತು. ಗಾಂಧಿಯವರನ್ನು ಬಂಧಿಸಿ ಆರು ವರ್ಷ ಜೈಲು ಶಿಕ್ಷೆ ವಿಧಿಸಲಾಯಿತು, ಆದರೆ 1924ರ ಫೆಬ್ರವರಿಯಲ್ಲಿ ಆರೋಗ್ಯ ಕಾರಣದಿಂದ ಬಿಡುಗಡೆಗೊಂಡರು.
