ಉದಯವಾಹಿನಿ, ಸ್ಟಾರ್ ಇಮೇಜ್ ಇರುವ ಸ್ಟಾರ್ ಚಿತ್ರಗಳ ನಿರ್ದೇಶಕ ಪ್ರಶಾಂತ್ ನೀಲ್ ಚಿತ್ರ ಮಾಡ್ತಿದ್ದಾರೆ ಅಂದ್ರೆ ಅದು ನೂರು ಕೋಟಿ ಬಜೆಟ್ ಮೀರುವುದಂತೂ ನಿಶ್ಚಿತ. ಇದೀಗ ಪ್ರಶಾಂತ್ ನೀಲ್ ಅಡ್ಡದಿಂದ ನಯಾ ನ್ಯೂಸ್ ಬಂದಿದೆ. ಮುಂಬರುವ ಚಿತ್ರಕ್ಕಾಗಿ ಪ್ರಶಾಂತ್ ನೀಲ್ 15 ಕೋಟಿ ರೂ. ವೆಚ್ಚದಲ್ಲಿ ಕೃತಕ ಮನೆ ಅಂದರೆ ಸೆಟ್ ಅನ್ನ ನಿರ್ಮಿಸಿದ್ದಾರಂತೆ.
ಬರೋಬ್ಬರಿ 15 ಕೋಟಿ ರೂ. ವೆಚ್ಚ ಅಂದ್ರೆ ಯೋಚಿಸಿ ಆ ಸೆಟ್ ಹೇಗಿರಬೇಡ. ಇಷ್ಟು ದುಡ್ಡಿನಲ್ಲಿ ಸೈಟ್ ಖರೀದಿಸಿ ಮನೆಯನ್ನೇ ಕಟ್ಟಿಸಿಕೊಳ್ಳಬಹುದಿತ್ತು. ಹೀಗಿರುವಾಗ ಸೆಟ್‌ಗಾಗಿ ಇಷ್ಟೊಂದು ಕೋಟಿ ಖರ್ಚು ಮಾಡಬೇಕಾ ಎಂದು ಆಶ್ಚರ್ಯವಾಗೋದು ಖಂಡಿತ. ಆದರೆ ಪ್ರಶಾಂತ್ ನೀಲ್ ಇಷ್ಟ ಪಡುವ ಮ್ಯಾಜಿಕಲ್ ಲೋಕವೇ ಬೇರೆ. ಅವರ ಕಲ್ಪನಾ ಲಹರಿಗೆ ತಕ್ಕಂತೆ ಬಣ್ಣ, ಅದಕ್ಕೆ ತಕ್ಕಂತೆ ಸಲಕರಣೆ ಹಾಗೂ ವಿಂಗಡನೆ ನೈಜ ಬೆಳಕು ಇರಬೇಕು. ಇದೇ ಕಾರಣಕ್ಕೆ ಮುಂಬರುವ ಜೂ.ಎನ್‌ಟಿಆರ್ ಚಿತ್ರಕ್ಕಾಗಿ ಹೈದ್ರಾಬಾದ್‌ನ ರಾಮೋಜಿರಾವ್ ಫಿಲ್ಮ್ ಸಿಟಿಯಲ್ಲಿ 15 ಕೋಟಿ ರೂ. ವೆಚ್ಚದಲ್ಲಿ ಒಂದು ಮನೆಯ ಸೆಟ್ ನಿರ್ಮಿಸಲಾಗಿದೆ.
ಪ್ರಶಾಂತ್ ನೀಲ್ ಹಾಗೂ ಜೂ.ಎನ್‌ಟಿಆರ್ (JR.NTR) ನಟನೆಯ ಈ ಚಿತ್ರಕ್ಕೆ `ಡ್ರ್ಯಾಗನ್’ (Dragon) ಎಂದು ಹೆಸರಿಡಲಾಗಿದೆ. ಈ ಚಿತ್ರಕ್ಕೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಕೆಲ ಭಾಗಗಳಲ್ಲಿ ಮೊದಲ ಶೆಡ್ಯೂಲ್ ಚಿತ್ರೀಕರಣ ನಡೆದಿದೆ. ಇದೀಗ ಎರಡನೇ ಶೆಡ್ಯೂಲ್ ಚಿತ್ರೀಕರಣಕ್ಕಾಗಿ ನಾಯಕನ ಪಾತ್ರದಲ್ಲಿ ಬರುವ ಮನೆಗಾಗಿ ಇಷ್ಟೊಂದು ಬಿಗ್ ಬಜೆಟ್‌ನಲ್ಲಿ ಸೆಟ್ ಹಾಕಲಾಗಿದೆ.
ಪ್ರತಿಯೊಂದರಲ್ಲೂ ಪರ್ಟಿಕ್ಯುಲರ್ ಇರುವ ಪ್ರಶಾಂತ್ ನೀಲ್, ನಾಯಕನ ಪಾತ್ರಕ್ಕೆ ಬೇಕಾದ ಸೆಟ್ ಮನೆಯ ವಿನ್ಯಾಸವನ್ನೂ ಹೇಳಿ ಮಾಡಿಸಿದ್ದಾರಂತೆ. ಇಲ್ಲಿಯೇ ಎರಡನೇ ಶೆಡ್ಯೂಲ್ ಶೂಟಿಂಗ್ ಕೆಲವೇ ದಿನಗಳಲ್ಲಿ ಪ್ರಾರಂಭವಾಗಲಿದೆ. ಇದೇ ಭಾಗದಲ್ಲಿ ನಟಿ ರುಕ್ಮಿಣಿ ವಸಂತ್ ಕೂಡ ಜಾಯಿನ್ ಆಗಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಯಾವುದರ ಕುರಿತೂ ಚಿತ್ರತಂಡದಿಂದ ಅಧಿಕೃತ ಘೋಷಣೆ ಇಂದಿಗೂ ಹೊರಬಂದಿಲ್ಲ.
