ಉದಯವಾಹಿನಿ, ನವದೆಹಲಿ:  ದೇಶದ ರಾಜಧಾನಿ ನವದೆಹಲಿಯಲ್ಲಿ ದರೋಡೆಕೋರರು ಅಟ್ಟಹಾಸ ಮೆರೆದಿದ್ದಾರೆ. ಸಿನಿಮಾ ಸ್ಟೈಲ್​ನಲ್ಲಿ ನಡುರಸ್ತೆಯಲ್ಲೇ ದರೋಡೆ ನಡೆಸಿದ್ದಾರೆ. ನವದೆಹಲಿಯ ಪ್ರಗತಿ ಮೈದಾನದ ಟನಲ್​ನಲ್ಲಿ ನಾಲ್ವರು ದುಷ್ಕರ್ಮಿಗಳು ಕಾರನ್ನು ಅಡ್ಡಗಟ್ಟಿ ಬಂದೂಕು ತೋರಿಸಿ ಬೆದರಿಸಿ ಕಳ್ಳತನ ಮಾಡಿದ್ದಾರೆ. ಇಡೀ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ. ಪ್ರಗತಿ ಮೈದಾನದ ಸುರಂಗ ಮಾರ್ಗದಿಂದ ಕಾರು ಬರುತ್ತಿದ್ದಂತೆ ಎರಡು ಬೈಕ್‌ಗಳಲ್ಲಿ ಬಂದ ದುಷ್ಕರ್ಮಿಗಳು ಕಾರನ್ನು ಅಡ್ಡಗಟ್ಟಿದ್ದಾರೆ. ಕಾರಿನಲ್ಲಿದ್ದವರನ್ನು ಗನ್ ತೋರಿಸಿ ಬೆದರಿಸಿ 2 ಲಕ್ಷ ನಗದು ಇದ್ದ ಬ್ಯಾಗ್​ ಕಸಿದು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಕೇವಲ 20 ಸೆಕೆಂಡುಗಳಲ್ಲಿ ದರೋಡೆ ನಡೆದಿದೆ. ಆದರೆ, ಕಳ್ಳತನದ ಸಂಪೂರ್ಣ ದೃಶ್ಯ ಅಲ್ಲಿನ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದ್ದು, ವಿಡಿಯೋ ವೈರಲ್ ಆಗುತ್ತಿದೆ. ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಟ್ವಿಟ್ಟರ್​ನಲ್ಲಿ ಈ ದರೋಡೆ ವಿಡಿಯೋ ಪೋಸ್ಟ್ ಮಾಡಿದ್ದು, ಲೆಫ್ಟಿನೆಂಟ್ ಗವರ್ನರ್ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

ಜನರನ್ನು ರಕ್ಷಿಸುವ ಸಾಮರ್ಥ್ಯವಿರುವ ಬೇರೆಯವರನ್ನು ಗವರ್ನರ್​ ಆಗಿ ನೇಮಿಸಬೇಕು. ಕಾನೂನು ಸುವ್ಯವಸ್ಥೆ ಕಾಪಾಡಲು ಕೇಂದ್ರಕ್ಕೆ ಸಾಧ್ಯವಾಗದಿದ್ದರೆ ಅದರ ಹೊಣೆಯನ್ನು ದೆಹಲಿ ಸರ್ಕಾರಕ್ಕೆ ನೀಡಲಿ. ನಾವು ಜನರಿಗೆ ರಕ್ಷಣೆ ನೀಡುವುದು ಹೇಗೆ ಎಂಬುದನ್ನು ತೋರಿಸುತ್ತೇವೆ ಎಂದು ಆಗ್ರಹಿಸಿದ್ದಾರೆ. ದರೋಡೆಯ ಸಿಸಿಟಿವಿ ದೃಶ್ಯಾವಳಿಗಳು ವೈರಲ್‌ ಆದ ಬೆನ್ನಲ್ಲೇ ಅಪರಾಧ ಪ್ರಕರಣವನ್ನ ದೆಹಲಿ ಪೊಲೀಸರು ದೃಢಪಡಿಸಿದ್ದಾರೆ. ದೆಹಲಿಯ ಪ್ರಗತಿ ಮೈದಾನದ ಟನಲ್​ನಲ್ಲಿ ನಾಲ್ವರು ದುಷ್ಕರ್ಮಿಗಳು 2 ಬೈಕ್‌ಗಳಲ್ಲಿ ಬಂದು ಬಿಳಿ ಬಣ್ಣದ ಕ್ಯಾಬ್ ಅಡ್ಡಗಟ್ಟಿದ್ದಾರೆ. ನಂತರ ಇಬ್ಬರು ದರೋಡೆಕೋರರು ಕೆಳಗಿಳಿದು ತಮ್ಮ ಬಂದೂಕುಗಳನ್ನು ಕಾರಿನಲ್ಲಿರುವವರತ್ತ ತೋರಿಸುತ್ತಾ, ಕಾರಿನಲ್ಲಿ ಕುಳಿತಿದ್ದವರಿಂದ ಕಪ್ಪು ಬಣ್ಣದ ಬ್ಯಾಗ್‌ ಅನ್ನು ಕಸಿದುಕೊಂಡು ಪರಾರಿಯಾಗಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಬಲೆ ಬೀಸಿದ್ದೇವೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!