ಉದಯವಾಹಿನಿ, ಭೋಪಾಲ್: ಸರ್ಕಾರಿ ಶಾಲೆಯೊಂದರಲ್ಲಿ ಇತ್ತೀಚೆಗೆ ನಡೆದ ಘಟನೆಯು ಅನೇಕರನ್ನು ಆಘಾತಕ್ಕೀಡು ಮಾಡಿದೆ. ಮಧ್ಯ ಪ್ರದೇಶದ ಭೋಪಾಲ್‌ನ ಮಹಾತ್ಮ ಗಾಂಧಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ, ಒಬ್ಬ ಮಹಿಳಾ ಶಿಕ್ಷಕಿ ಕುರ್ಚಿಯ ಮೇಲೆ ಕುಳಿತಿರುವುದನ್ನು ಮತ್ತು ವಿದ್ಯಾರ್ಥಿಯೊಬ್ಬ ಆಕೆಯ ಪಾದಗಳಿಗೆ ಮಸಾಜ್ ಮಾಡುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
ಘಟನೆಯ ದೃಶ್ಯವು ಚಿತ್ರೀಕರಣಗೊಳ್ಳುತ್ತಿದೆ ಎಂದು ತಿಳಿದ ಕೂಡಲೇ ಶಿಕ್ಷಕಿ ತನ್ನ ಪಾದವನ್ನು ಹಿಂತೆಗೆದುಕೊಂಡಳು. ಇಂತಹ ನಡವಳಿಕೆ ಸರಿಯಲ್ಲ ಎಂದು ಇತರ ಶಿಕ್ಷಕರು ಹೇಳಿದ್ದಾರೆ. ಇನ್‌ಸ್ಟಾಗ್ರಾಮ್ ವಿಡಿಯೊದಲ್ಲಿ, ಸರಿಯಾದ ಬೆಂಚುಗಳ ಕೊರತೆಯಿಂದಾಗಿ ಹಲವಾರು ವಿದ್ಯಾರ್ಥಿಗಳು ನೆಲದ ಮೇಲೆ ಕುಳಿತಿರುವುದನ್ನು ತೋರಿಸಲಾಗಿದೆ. ಶಿಕ್ಷಕಿಯು ಕುರ್ಚಿಯ ಮೇಲೆ ಆರಾಮವಾಗಿ ಕುಳಿತುಕೊಂಡಿದ್ದಾಳೆ. ವಿದ್ಯಾರ್ಥಿ ತನ್ನ ಕಾಲುಗಳಿಗೆ ಮಸಾಜ್ ಮಾಡುವಾಗ ಅವಳು ಮತ್ತೊಂದು ಕುರ್ಚಿಯ ಮೇಲೆ ಕಾಲು ಇಟ್ಟಿದ್ದಾಳೆ. ಯಾರೋ ವಿಡಿಯೊ ರೆಕಾರ್ಡ್ ಮಾಡುತ್ತಿದ್ದಾರೆಂದು ಅರಿತುಕೊಂಡ ಕೂಡಲೇ ತನ್ನ ಕಾಲನ್ನು ಹಿಂದಕ್ಕೆ ತೆಗೆದುಕೊಂಡಿದ್ದಾಳೆ.
ವರದಿಯ ಪ್ರಕಾರ, ಇತರ ತರಗತಿಗಳ ಮಕ್ಕಳು ಮಧ್ಯಾಹ್ನ ಊಟದ ನಂತರ ಸದ್ದಿಲ್ಲದೆ ಓದುತ್ತಿದ್ದರು. ಆದರೆ 4ನೇ ತರಗತಿಯ ವಿದ್ಯಾರ್ಥಿಗಳು ಗದ್ದಲ ಮಾಡುತ್ತಿದ್ದರು. ವಿದ್ಯಾರ್ಥಿಗಳಿಗೆ ಬೆಂಚುಗಳ ಕೊರತೆಯಿದ್ದು, ನೆಲದ ಮೇಲೆ ಕುಳಿತುಕೊಳ್ಳಬೇಕಾದ ಪರಿಸ್ಥಿತಿಯಿದೆ. ಈ ಮಧ್ಯೆ, ಒಬ್ಬ ವಿದ್ಯಾರ್ಥಿ ಶಿಕ್ಷಕಿಯ ಪಾದಗಳಿಗೆ ಮಸಾಜ್ ಮಾಡುತ್ತಿರುವುದು ಕಂಡುಬಂದಿದೆ. ಈ ವಿಡಿಯೊ ವೈರಲ್ ಆದ ನಂತರ ತನ್ನ ಕಾಲು ಹೊಂಡಕ್ಕೆ ಸಿಲುಕಿ ನೋವುಂಟಾಗಿತ್ತು. ಹೀಗಾಗಿ ವಿದ್ಯಾರ್ಥಿ ತನಗೆ ಸಹಾಯ ಮಾಡುತ್ತಿದ್ದ ಎಂದು ಹೇಳಿದ್ದಾಳೆ.
