ಉದಯವಾಹಿನಿ, ಕೊವೆಂಟ್ರಿ: ಇದೇ ಮೊದಲ ಬಾರಿಗೆ ಯುನೈಟೆಡ್ ಕಿಂಗ್ಡಮ್‌ ನಾದ್ಯಂತ ಇರುವ ಸುಮಾರು 150ಕ್ಕೂ ಹೆಚ್ಚು ಬಿಲ್ಲವ ಕುಟುಂಬಗಳು ಒಗ್ಗೂಡಿ ಮೊದಲ ಬ್ರಿಟನ್ ಬಿಲ್ಲವ ಬಳಗ ವಾರ್ಷಿಕ ಸಭೆಯನ್ನು ಕೊವೆಂಟ್ರಿಯ ಹೊಟೇಲ್‌ನಲ್ಲಿ ಆಯೋಜಿಸಿತ್ತು. ಇದೊಂದು ಮೈಲಿಗಲ್ಲು. ಯಾಕೆಂದರೆ ಇದರಲ್ಲಿ ಭಾಗವಹಿಸಿದ್ದ ಬಿಲ್ಲವ ಕುಟುಂಬಗಳು ಸಂಸ್ಕೃತಿ, ಏಕತೆ ಮತ್ತು ಸಮುದಾಯದ ಶಕ್ತಿಯನ್ನು ಹಬ್ಬದಂತೆ ಆಚರಿಸಿಕೊಂಡಿತು. 2016ರಲ್ಲಿ ಕೆಲವೊಂದು ಬಿಲ್ಲವ ಕುಟುಂಬಗಳನ್ನು ಸಂಪರ್ಕಿಸಲು ರಚಿಸಿದ ಸರಳ ವಾಟ್ಸಾಪ್ ಗುಂಪಿನಿಂದಾಗಿ ಇಂದು ಇದು ಸಾಂಸ್ಕೃತಿಕ ಸಂಘಟನೆಯಾಗಿ ಬೆಳೆದುಬಂದಿದೆ.2019ರಲ್ಲಿ ಸ್ಕಿಪ್ಟನ್‌ನಲ್ಲಿ ಸಂಘಟನೆಯ ಮೊತ್ತ ಮೊದಲ ಅನೌಪಚಾರಿಕ ಸಂಗಮ ನಡೆಸಲಾಗಿದ್ದು, ಇದು ಬಳಗ ಅಧಿಕೃತವಾಗಿ ರೂಪುಗೊಳ್ಳಲು ದಾರಿ ಮಾಡಿ ಕೊಟ್ಟಿತು. ಡಾ. ಪಿ.ಕೆ. ಮನೋಜ್ ಪೂಜಾರಿ ಅವರ ನಾಯಕತ್ವದಲ್ಲಿ ರಚಿಸಿರುವ ಸಮಿತಿ ಒಂದು ಬಳಗದ ಸಂವಿಧಾನವನ್ನು ಅಂಗೀಕರಿಸಿದ್ದು, ಇದರ ಪ್ರಕಾರ ಡಾ. ಮನೋಜ್ ಅವರನ್ನು ಬಳಗದ ಸ್ಥಾಪಕ ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ.
ಕಾರ್ಯಕ್ರಮದ ಉದ್ಘಾಟನಾ ಭಾಷಣದಲ್ಲಿ ಮಾತನಾಡಿದ ಡಾ. ಮನೋಜ್, ನಾವು ಕೇವಲ ಸಂಪರ್ಕಕ್ಕಾಗಿ ವೇದಿಕೆಯನ್ನು ಕಟ್ಟಬೇಕೆಂದಿಲ್ಲ. ನಮ್ಮ ಮಕ್ಕಳು ತಮ್ಮ ಮೂಲಗಳನ್ನು ಮರೆಯಬಾರದು. ಅವರು ನಮ್ಮ ಸಂಸ್ಕೃತಿಯ ಅರಿವು ಹೊಂದಿ, ಅದರೊಂದಿಗೆ ಬೆಳೆಯಬೇಕು. ಇವತ್ತು ನಾವು ಕೇವಲ ಬಳಗದ ವಾರ್ಷಿಕೋತ್ಸವನ್ನಷ್ಟೇ ಆಚರಿಸುತ್ತಿಲ್ಲ. ನಾವು ಒಂದು ಪರಂಪರೆಯನ್ನು ಇಲ್ಲಿ ನಿರ್ಮಿಸುತ್ತಿದ್ದೇವೆ ಎಂದು ತಿಳಿಸಿದರು. ಶ್ರೀ ಗುರು ಚಾರಿಟಿ ಟ್ರಸ್ಟ್ ಮತ್ತು ಮಂಗಳೂರು ಮಾಲಾವಿ ಅಸೋಸಿಯೇಷನ್ ನ ಸಂದೇಶ್ ವಿವೇಕಾನಂದ ಅವರು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

Leave a Reply

Your email address will not be published. Required fields are marked *

error: Content is protected !!