ಉದಯವಾಹಿನಿ, ನವದೆಹಲಿ: ಅಪಘಾತದಿಂದ ಗಾಯಗೊಂಡ ನವಿಲೊಂದರ ಗರಿಗಳನ್ನು ಗ್ರಾಮಸ್ಥರು ಕಿತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಘಟನೆ ದೇಶಾದ್ಯಂತ ಆಘಾತಕಾರಿಆಕ್ರೋಶಕ್ಕೆ ಕಾರಣವಾಗಿದ್ದು, ವನ್ಯಜೀವಿ ಕಾರ್ಯಕರ್ತರು, ಪ್ರಾಣಿಪ್ರಿಯರು ಮತ್ತು ನೆಟ್ಟಿಗರು ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಭಾರತದ ರಾಷ್ಟ್ರೀಯ ಪಕ್ಷಿಯಾದ ನವಿಲಿಗೆ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಉನ್ನತ ಮಟ್ಟದ ರಕ್ಷಣೆ ಇದೆ.
ಗಾಯಗೊಂಡ ನವಿಲು ರಸ್ತೆಯಲ್ಲಿ ನರಳುತ್ತಿರುವಾಗ, ಗ್ರಾಮಸ್ಥರು ಅದನ್ನು ರಕ್ಷಿಸದೇ, ಗರಿಗಳನ್ನು ಕಿತ್ತಿರುವ ದೃಶ್ಯ ವಿಡಿಯೋದಲ್ಲಿ ಕಾಣಿಸಿದೆ. ಈ ಘಟನೆಯ ಖಚಿತ ಸ್ಥಳ ತಿಳಿದಿಲ್ಲವಾದರೂ, ಸೆಪ್ಟೆಂಬರ್ 29 ರಂದು ವೈರಲ್ ಆದ ಈ ವಿಡಿಯೋ ಜನರ ಆಕ್ರೋಶಕ್ಕೆ ಕಾರಣವಾಯಿತು. “ನವಿಲಿನ ಗಾಯವನ್ನು ಉಪಯೋಗಿಸಿಕೊಂಡು ಗರಿಗಳನ್ನು ಕಿತ್ತಿರುವುದು ಕ್ರೂರತೆ” ಎಂದು ನೆಟ್ಟಿಗರು ಖಂಡಿಸಿದ್ದಾರೆ.
