ಉದಯವಾಹಿನಿ, ನವದೆಹಲಿ: ಕೇಂದ್ರ ಸರ್ಕಾರಿ ನೌಕರರ ಮಕ್ಕಳಿಗೆ ದಸರಾ ಹಬ್ಬದ ಕೊಡುಗೆ ಎನ್ನುವಂತೆ 57 ಕೇಂದ್ರೀಯ ವಿದ್ಯಾಲಯಗಳ ಸ್ಥಾಪನೆಗೆ ಅನುಮೋದನೆ ನೀಡಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಚಿವ ಸಂಪುಟ ಸಮಿತಿ, 2026-27ರಿಂದ 9 ವರ್ಷಗಳ ಅವಧಿಯಲ್ಲಿ 5862.55 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಒಟ್ಟು 57 ಹೊಸ ಕೇಂದ್ರೀಯ ವಿದ್ಯಾಲಯಗಳನ್ನು ತೆರೆಯಲು ಒಪ್ಪಿಗೆ ಸೂಚಿದೆ ಎಂದು ಮಾಹಿತಿ ನೀಡಿದ್ದಾರೆ.
ಕೇಂದ್ರ ಸರ್ಕಾರಿ ನೌಕರರ ಮಕ್ಕಳ ಶೈಕ್ಷಣಿಕ ಅಗತ್ಯತೆ ಪೂರೈಸಲು ಬದ್ಧವಾಗಿ ಕೇಂದ್ರ ಸರ್ಕಾರ ಈ ಐತಿಹಾಸಿಕ ನಿರ್ಣಯ ತೆಗೆದುಕೊಂಡಿದೆ.
ನೂತನ ವಿದ್ಯಾಲಯಗಳನ್ನು ತೆರೆಯಲು 585.52 ಕೋಟಿ ಬಂಡವಾಳ ವೆಚ್ಚ ಮತ್ತು 3277.03 ಕೋಟಿ ಕಾರ್ಯಾಚರಣೆ ವೆಚ್ಚವನ್ನು ಅಂದಾಜಿಸಿದೆ ಎಂದು ನುಡಿದಿದ್ದಾರೆ. ರಾಷ್ಟ್ರೀಯ ಶಿಕ್ಷಣ ನೀತಿ 2020ಕ್ಕೆ ಮಾದರಿ ಶಾಲೆಗಳಾಗಿ ಮೊದಲ ಬಾರಿಗೆ ಈ 57 ಕೇಂದ್ರೀಯ ವಿದ್ಯಾಲಯಗಳನ್ನು ಬಾಲವಟಿಕಾಗಳೊಂದಿಗೆ ಮಂಜೂರು ಮಾಡಲಾಗಿದೆ. ಈ ಮೂಲಕ ರಕ್ಷಣಾ ಮತ್ತು ಅರೆಸೈನಿಕ ಪಡೆಗಳು ಸೇರಿದಂತೆ ಕೇಂದ್ರ ಸರ್ಕಾರದ ನೌಕರರ ಮಕ್ಕಳ ಶೈಕ್ಷಣಿಕ ಅಗತ್ಯಗಳನ್ನು ಪೂರೈಸಲು ದೇಶಾದ್ಯಂತ ಏಕರೂಪದ ಗುಣಮಟ್ಟದ ಶೈಕ್ಷಣಿಕ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ ಎಂದಿದ್ದಾರೆ.
ಮಾಸ್ಕೋ, ಕಠ್ಮಂಡು ಮತ್ತು ಟೆಹ್ರಾನ್ ಸೇರಿದಂತೆ 3 ವಿದೇಶಗಳಲ್ಲಿ ಸಹ ಒಟ್ಟು 1,288 ಕ್ರಿಯಾತ್ಮಕ ಕೇಂದ್ರೀಯ ವಿದ್ಯಾಲಯಗಳಿದ್ದು, 2025ರ ಜೂನ್ ಅಂತ್ಯದ ವೇಳೆಗೆ ಅಂದಾಜು 13.62 ಲಕ್ಷ ವಿದ್ಯಾರ್ಥಿಗಳು ದಾಖಲಾಗಿದ್ದಾರೆ. ಈ ಹಿಂದೆ ಕೇಂದ್ರ ಸರ್ಕಾರ 85 ಕೇಂದ್ರೀಯ ವಿದ್ಯಾಲಯಗಳನ್ನು ನೀಡಿತ್ತು. ಇದೀಗ ಹೆಚ್ಚಿನ ಬೇಡಿಕೆ, ಪ್ರಸ್ತಾವನೆಗಳಿರುವುದರಿಂದ ಮತ್ತೆ 57 ಹೆಚ್ಚುವರಿ ವಿದ್ಯಾಲಯಗಳನ್ನು ಮಂಜೂರು ಮಾಡಿದೆ ಎಂದಿದ್ದಾರೆ.
