ಉದಯವಾಹಿನಿ, ನವದೆಹಲಿ: ಕೇಂದ್ರ ಸರ್ಕಾರ ಇದೀಗ ಹಿಂಗಾರು ಹಂಗಾಮು ಬೆಳೆಗಳ ಕನಿಷ್ಠ ಬೆಂಬಲ ಬೆಲೆ ಹೆಚ್ಚಿಸುವ ಮೂಲಕ ಅತಿವೃಷ್ಟಿಯಿಂದ ತತ್ತರಿಸಿರುವ ರೈತ ಸಮುದಾಯದ ನೆರವಿಗೆ ಧಾವಿಸಿದೆ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ್‌ ಜೋಶಿ (Pralhad Joshi) ತಿಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ 2026-27ರ ಮಾರುಕಟ್ಟೆ ಋತುವಿಗಾಗಿ ಎಲ್ಲಾ ಕಡ್ಡಾಯ ರಬಿ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಹೆಚ್ಚಿಸಲು ಅನುಮೋದನೆ ನೀಡಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
2026-27ರ ಮಾರುಕಟ್ಟೆ ಋತುವಿನಲ್ಲಿ ಕುಸುಬೆಗೆ ಅತಿ ಹೆಚ್ಚು ಅಂದರೆ ಕ್ವಿಂಟಲ್‌ಗೆ ₹600 ಬೆಂಬಲ ಬೆಲೆ ಘೋಷಿಸಲಾಗಿದೆ. ಮಸೂರ್ ಕ್ವಿಂಟಲ್‌ಗೆ ₹300, ಸಾಸಿವೆ, ಕಡಲೆ, ಬಾರ್ಲಿ ಮತ್ತು ಗೋಧಿಗೆ ಕ್ರಮವಾಗಿ ₹250, ₹225, ₹170 ಮತ್ತು ₹160 ಹೆಚ್ಚಳ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಹಿಂಗಾರು ಮಾರುಕಟ್ಟೆ ಋತುವಿನ ಬೆಳೆಗಳಿಗೆ ಬೆಂಬಲ ಬೆಲೆ ಹೆಚ್ಚಳ 2018-19ರ ಕೇಂದ್ರ ಬಜೆಟ್ ಘೋಷಣೆಗೆ ಅನುಗುಣವಾಗಿದೆ. ದೇಶಾದ್ಯಂತ ಸರಾಸರಿ ಉತ್ಪಾದನಾ ವೆಚ್ಚದ ಕನಿಷ್ಠ 1.5 ಪಟ್ಟು ಎಂಎಸ್‌ಪಿ (MSP) ನಿಗದಿಪಡಿಸಲಾಗಿದೆ. ಉತ್ಪಾದನಾ ವೆಚ್ಚಕ್ಕಿಂತ ನಿರೀಕ್ಷಿತ ಲಾಭವಾಗಿ ಗೋಧಿಗೆ 109 ಪ್ರತಿಶತ, ಸಾಸಿವೆಗೆ 93 ಪ್ರತಿಶತ, ಮಸೂರಕ್ಕೆ 89 ಪ್ರತಿಶತ, ಕಡಲೆಗೆ 59 ಪ್ರತಿಶತ, ಬಾರ್ಲಿಗೆ 58 ಪ್ರತಿಶತ ಮತ್ತು ಕುಸುಬೆಗೆ 50 ಪ್ರತಿಶತ ಲಾಭ ರೈತರಿಗೆ ಲಭಿಸಲಿದೆ ಎಂದಿದ್ದಾರೆ.

Leave a Reply

Your email address will not be published. Required fields are marked *

error: Content is protected !!