ಉದಯವಾಹಿನಿ, ವಾಷಿಂಗ್ಟನ್: ಎರಡು ವಿಮಾನಗಳು ಡಿಕ್ಕಿಯಾದ ಘಟನೆ ನ್ಯೂಯಾರ್ಕ್‌ನ ಲಾಗಾರ್ಡಿಯಾ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಬುಧವಾರ ರಾತ್ರಿ 9:56 ರ ಸುಮಾರಿಗೆ (ಸ್ಥಳೀಯ ಕಾಲಮಾನ) ಈ ಘಟನೆ ನಡೆದಿದೆ. ಎರಡೂ ವಿಮಾನಗಳು ಡೆಲ್ಟಾ ಏರ್‌ಲೈನ್ಸ್‌ಗೆ ಸೇರಿದ್ದಾಗಿವೆ. ಒಂದು ವಿಮಾನವು ರನ್‌ವೇಗೆ ತೆರಳುವಾಗ ಅದರ ಮುಂಭಾಗ ಮತ್ತೊಂದು ವಿಮಾನದ ರೆಕ್ಕೆಗೆ ಬಡಿದಿದೆ. ಇದರಿಂದ ವಿಮಾನದ ರೆಕ್ಕೆ ಮುರಿದಿದೆ. ಅಲ್ಲದೇ ಡಿಕ್ಕಿ ಹೊಡೆದ ವಿಮಾನದ ಮುಂಭಾಗಕ್ಕೆಹಾನಿಯಾಗಿದೆ ಎಂದು ವರದಿಯಾಗಿದೆ. ವಿಮಾನ ಡಿಕ್ಕಿಯಾದ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ವೈರಲ್ ಆಗಿದೆ.
ಈ ಅಪಘಾತದಲ್ಲಿ ಒಬ್ಬರು ಗಾಯಗೊಂಡಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಹಾಗೂ ಭಾರೀ ಅವಘಡ ಸಂಭವಿಸಿಲ್ಲ. ಈ ಬಗ್ಗೆ ಡೆಲ್ಟಾ ಏರ್‌ಲೈನ್ಸ್ ಯಾವುದೇ ಹೇಳಿಕೆ ನೀಡಿಲ್ಲ.
ಈ ವರ್ಷ ಮಾರ್ಚ್‌ನಲ್ಲಿ ಲಾಗಾರ್ಡಿಯಾ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ವೇಳೆ ಡೆಲ್ಟಾ ವಿಮಾನದ ರೆಕ್ಕೆ ರನ್‌ವೇಗೆ ಡಿಕ್ಕಿಯಾಗಿತ್ತು. ಈ ಬಗ್ಗೆ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ತನಿಖೆ ನಡೆಸಿತ್ತು. ಡೆಲ್ಟಾ ವಿಮಾನ ಅಪಘಾತ ಪದೇ ಪದೇ ಸಂಭವಿಸುತ್ತಿರುವುದು ಸುರಕ್ಷತೆ ಬಗ್ಗೆ ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
