ಉದಯವಾಹಿನಿ, ಸ್ಟಾಕ್‌ಹೋಮ್(ಸ್ವೀಡನ್): ಈ ವರ್ಷದ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ಸ್ಟಾಕ್‌ಹೋಮ್‌ನಲ್ಲಿರುವ ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸಸ್ ಇಂದು ಘೋಷಿಸಿದೆ. ಅಮೆರಿಕದ ಭೌತಶಾಸ್ತ್ರಜ್ಞರಾದ ಜಾನ್ ಕ್ಲಾರ್ಕ್, ಮೈಕೆಲ್ ಹೆಚ್.ಡೆವೊರೆಟ್ ಮತ್ತು ಜಾನ್ ಎಂ. ಮಾರ್ಟಿನಿಸ್ ಅವರಿಗೆ ಪ್ರತಿಷ್ಠಿತ ಪ್ರಶಸ್ತಿ ಪ್ರಕಟವಾಗಿದೆ. ಕ್ವಾಂಟಮ್ ಮೆಕ್ಯಾನಿಕ್ಸ್ನಲ್ಲಿನ ಸಾಧನೆಗಾಗಿ ಮೂವರು ಅಮೆರಿಕನ್ ವಿಜ್ಞಾನಿಗಳಿಗೆ ಭೌತಶಾಸ್ತ್ರದ ನೊಬೆಲ್ ಒಲಿದು ಬಂದಿದೆ.ವಿಜ್ಞಾನಿಗಳ ಸಾಧನೆ ಏನು?: ಪ್ರಶಸ್ತಿ ವಿಜೇತ ಮೂವರು ವಿಜ್ಞಾನಿಗಳು ಸೂಪರ್ ಕಂಡಕ್ಟರ್‌ಗಳ ಸಹಾಯದಿಂದ ವಿಶೇಷ ವಿದ್ಯುತ್ ಸರ್ಕ್ಯೂಟ್ ಅನ್ನು ರಚಿಸಿದರು. ಯಾವುದೇ ಪ್ರತಿರೋಧವಿಲ್ಲದೆ ಅದು ವಿದ್ಯುತ್ ಅನ್ನು ಸಾಗಿಸುತ್ತದೆ. ಈ ವಿದ್ಯುತ್ ಸರ್ಕ್ಯೂಟ್‌ನಲ್ಲಿ, ಅವರು ಎರಡು ಪ್ರಮುಖ ಕ್ವಾಂಟಮ್ ಪರಿಣಾಮಗಳನ್ನು ಕಂಡುಹಿಡಿದರು.
ಕ್ವಾಂಟಮ್ ವಿಧಾನ: ಕ್ವಾಂಟಮ್ ವಿಧಾನವೆಂದರೆ, ಒಂದು ಕಣವು ಏರಿಳಿತದ ಪ್ರದೇಶದಲ್ಲಿ ತಡೆಗೋಡೆಯ ಮೂಲಕ ನೇರವಾಗಿ ಚಲಿಸುವುದು. ಹೆಚ್ಚಿನ ಸಂಖ್ಯೆಯ ಕಣಗಳು ಇದ್ದಾಗ ಈ ಕ್ವಾಂಟಮ್ ವಿಧಾನದ ಯಾಂತ್ರಿಕ ಪರಿಣಾಮವು ಸಾಮಾನ್ಯವಾಗಿ ಅತ್ಯಲ್ಪವಾಗುತ್ತದೆ. ಪ್ರಶಸ್ತಿ ವಿಜೇತ ಅಮೆರಿಕನ್ ವಿಜ್ಞಾನಿಗಳು ನಡೆಸಿದ ಪ್ರಯೋಗದಲ್ಲಿ ಕೈಯಲ್ಲಿ ಹಿಡಿದಿಡಬಹುದಾದ ಸರ್ಕ್ಯೂಟ್ ಅನ್ನು ರೂಪಿಸಿದ್ದಾರೆ. ನೊಬೆಲ್ ಬಗ್ಗೆ ಒಂದಿಷ್ಟು..: 1901 ರಿಂದ 2024 ರವರೆಗೆ ಭೌತಶಾಸ್ತ್ರದಲ್ಲಿ 118 ನೊಬೆಲ್ ಪ್ರಶಸ್ತಿಗಳನ್ನು ನೀಡಲಾಗಿದೆ. ಈವರೆಗೂ 227 ವಿಜ್ಞಾನಿಗಳು ಅತ್ಯುನ್ನತ ಪ್ರಶಸ್ತಿ ಪಡೆದಿದ್ದಾರೆ. 1903 ರಲ್ಲಿ ಮೇರಿ ಕ್ಯೂರಿ ಅವರು ಸೇರಿದಂತೆ ಐವರು ಮಹಿಳೆಯರು ಈ ಪ್ರಶಸ್ತಿಯನ್ನು ಪಡೆದಿದ್ದಾರೆ.
ಕಳೆದ ವರ್ಷ (2024) ಭೌತಶಾಸ್ತ್ರ ವಿಭಾಗದಲ್ಲಿ ಭೌತಶಾಸ್ತ್ರಜ್ಞ ಜಾನ್ ಹಾಪ್ಫೀಲ್ಡ್ ಮತ್ತು ಕಂಪ್ಯೂಟರ್ ವಿಜ್ಞಾನಿ ಜೆಫ್ರಿ ಹಿಂಟನ್ ಅವರಿಗೆ ನೀಡಲಾಗಿತ್ತು. ಅವರನ್ನು ಕೃತಕಬುದ್ಧಿಮತ್ತೆಯ (ಎಐ) ಪಿತಾಮಹರಲ್ಲಿ ಒಬ್ಬರೆಂದು ಕರೆಯಲಾಗುತ್ತದೆ. ವೈದ್ಯಕೀಯ ವಿಭಾಗದ ನೊಬೆಲ್: ವೈದ್ಯಕೀಯ ವಿಭಾಗದಲ್ಲಿ ಮೂವರು ವಿಜ್ಞಾನಿಗಳು ನೊಬೆಲ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಬಾಹ್ಯ ರೋಗನಿರೋಧಕ ಸಹಿಷ್ಣುತೆಯ ಕುರಿತಾದ ಸಂಶೋಧನೆಗಾಗಿ ಅಮೆರಿಕದ ಮೇರಿ ಇ.ಬ್ರಂಕೋವ್(64), ಅಮೆರಿಕದ ಫ್ರೆಡ್ ರಾಮ್ಸ್‌ಡೆಲ್(63) ಮತ್ತು ಜಪಾನ್‌ನ ಷಿಮೊನ್ ಸಕಾಗುಚಿ(74) ಅವರಿಗೆ ನೊಬೆಲ್ ಸಮಿತಿ ಅತ್ಯುನ್ನತ ಪ್ರಶಸ್ತಿ ಘೋಷಿಸಿದೆ.
ಮೂವರು ವಿಜ್ಞಾನಿಗಳು ಮಾಡಿದ ಸಂಶೋಧನೆಯು ಕ್ಯಾನ್ಸರ್, ಆಟೋ ಇಮ್ಯೂನ್ ಕಾಯಿಲೆಗಳಿಗೆ ಹೊಸ ಚಿಕಿತ್ಸಾ ವಿಧಾನಗಳ ಅಭಿವೃದ್ಧಿಗೆ ಕಾರಣವಾಗಿದೆ.
ನೊಬೆಲ್ ಪ್ರಶಸ್ತಿಗೆ ಆಯ್ಕೆಯಾದವರಿಗೆ ಡಿಪ್ಲೊಮಾ, ಚಿನ್ನದ ಪದಕ ಮತ್ತು 11 ಮಿಲಿಯನ್ ಸ್ವೀಡಿಷ್ ಕ್ರೋನರ್ (ಸುಮಾರು 10.38 ಕೋಟಿ ರೂ.) ನೀಡಲಾಗುತ್ತದೆ.
