ಉದಯವಾಹಿನಿ, ಬೆಂಗಳೂರು: ಬಿಗ್‌ಬಾಸ್ ಶೋಗೆ ಸರ್ಕಾರ ಬೀಗ ಹಾಕಿಸಿದ ಬೆನ್ನಲ್ಲೇ ಸರ್ಕಾರ, ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಜೆಡಿಎಸ್ ಅಟ್ಯಾಕ್ ಮುಂದುವರೆಸಿದೆ. ಈ ಸಂಬಂಧ ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ಜೆಡಿಎಸ್ ಸರಣಿ ಪ್ರಶ್ನೆಗಳನ್ನ ಕೇಳಿದೆ. ಬೆಂಗಳೂರು ಗುಂಡಿಗಳನ್ನ ಯಾವಾಗ ಬಂದ್ ಮಾಡಿಸುತ್ತೀರಾ? ಯಾವಾಗ ಕಾಂಗ್ರೆಸ್ ಸರ್ಕಾರದ 60% ಕಮಿಷನ್ ದಂಧೆಗೆ ಬೀಗ ಹಾಕ್ತೀರಾ ಎಂದು ವಾಗ್ದಾಳಿ ನಡೆಸಿದೆ.
ಎಕ್ಸ್‌ನಲ್ಲಿ ಏನಿದೆ..?: ನಿಯಮಗಳ ಉಲ್ಲಂಘನೆ ನೆಪದಲ್ಲಿ ಬಿಡದಿಯ ಬಿಗ್‌ಬಾಸ್ ಮನೆಗೆ ಬೀಗ ಹಾಕಿಸಿದ್ದೀರಿ. ಒಪ್ಪಿಕೊಳ್ಳೋಣ. ಅದೇ ರೀತಿ ಬೆಂಗಳೂರಿನ ರಸ್ತೆ ಗುಂಡಿಗಳನ್ನು ಯಾವಾಗ ಬಂದ್ ಮಾಡಿಸುತ್ತೀರಾ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿವಕುಮಾರ್ ಅವರೇ. ರಾಜ್ಯದಲ್ಲಿ ನಿರಂತರವಾಗಿ ನಡೆಯುತ್ತಿರುವ ರೈತರ ಆತ್ಮಹತ್ಯೆಗಳನ್ನು ಯಾವಾಗ ಬಂದ್ ಮಾಡಿಸುತ್ತೀರಾ? ರಾಜ್ಯದ ಜನರ ಮೇಲೆ ನಿರಂತರವಾಗಿ ತೆರಿಗೆ ಬರೆ ಎಳೆದು ಲೂಟಿ ಹೊಡೆಯುತ್ತಿರುವುದಕ್ಕೆ ಯಾವಾಗ ಬೀಗ ಹಾಕುತ್ತೀರಾ? ಬೆಲೆ ಏರಿಕೆಗಳ ಮೂಲಕ ಜನಸಾಮಾನ್ಯರನ್ನು ಪಿಕ್ ಪಾಕೆಟ್ ಮಾಡುತ್ತಿರುವ ನಿಮ್ಮ ಕಾಂಗ್ರೆಸ್ ಸರ್ಕಾರಕ್ಕೆ ಯಾವಾಗ ಬೀಗ ಹಾಕುತ್ತೀರಾ..?
ಉತ್ತರ ಕರ್ನಾಟಕದಲ್ಲಿ ನೆರೆ ಹಾವಳಿಯನ್ನು ತಡೆಯಲು ಯಾವ ರೀತಿ ಬೀಗ ಹಾಕಿಸುತ್ತೀರಾ? ರಾಜ್ಯದ ಜನರ ತೆರಿಗೆ ಹಣವನ್ನು ಅಕ್ರಮವಾಗಿ ವಾಮಮಾರ್ಗಗಳ ಮೂಲಕ ಕಾಂಗ್ರೆಸ್ ಹೈಕಮಾಂಡ್‌ಗೆ ಕಪ್ಪ ಒಪ್ಪಿಸುತ್ತಿರುವುದಕ್ಕೆ ಯಾವಾಗ ಬೀಗ ಹಾಕಿಸುತ್ತೀರಾ? ಕಾಂಗ್ರೆಸ್ ಸರ್ಕಾರದ 60% ಕಮಿಷನ್ ದಂಧೆಗೆ ಯಾವಾಗ ಬೀಗ ಹಾಕುತ್ತೀರಾ?
ಕಾಂಗ್ರೆಸ್ ಶಾಸಕರು ಮತ್ತು ಕಾಂಗ್ರೆಸ್ ಪುಢಾರಿಗಳು ನಡೆಸುತ್ತಿರುವ ಕ್ಯಾಸಿನೋ ದಂಧೆ, ಅಕ್ರಮಗಳಿಗೆ ಯಾವಾಗ ಬೀಗ ಹಾಕಿಸುತ್ತೀರಾ? ಭ್ರಷ್ಟಾಚಾರದ ಕೂಪಗಳಾಗಿರುವ ಸರ್ಕಾರಿ ಇಲಾಖೆ, ಕಚೇರಿಗಳಿಗೆ ಯಾವಾಗ ಬೀಗ ಹಾಕಿಸುತ್ತೀರಾ? ಕೈಲಾಗದವರು ಮೈಪರಚಿ ಕೊಂಡಂತೆ ಇದೆ ಕಾಂಗ್ರೆಸ್ ಸರ್ಕಾರದ ದುರಾಡಳಿತ ಎಂದು ಕಿಡಿಕಾರಿದೆ.

Leave a Reply

Your email address will not be published. Required fields are marked *

error: Content is protected !!