ಉದಯವಾಹಿನಿ, ನವದೆಹಲಿ: ಸತತ 24 ವರ್ಷಗಳ ಅಧಿಕಾರವಧಿ ಪೂರೈಸಿ ಪ್ರಧಾನಿ ನರೇಂದ್ರ ಮೋದಿ ಬೆಳ್ಳಿ ವಸಂತಕ್ಕೆ ಕಾಲಿಟ್ಟಿದ್ದಾರೆ.
2001ರಲ್ಲಿ ಅ.7ರಂದು ಗುಜರಾತ್ ಮುಖ್ಯಮಂತ್ರಿಯಾಗಿ ಮೊದಲ ಬಾರಿಗೆ ಪ್ರಮಾಣ ವಚನ ಸ್ವೀಕರಿಸಿದ್ದರು. ಅಂದಿನಿಂದ ಇಂದಿನವರೆಗೆ ನಿರಂತರವಾಗಿ ಸರ್ಕಾರಗಳ ಮುಖ್ಯಸ್ಥರಾಗಿ ಅಧಿಕಾರದಲ್ಲಿದ್ದಾರೆ. 2001ರಿಂದ 2014ರ ಮಧ್ಯಭಾಗದವರೆಗೆ 13 ವರ್ಷಗಳ ಕಾಲ ಗುಜರಾತ್ ಮುಖ್ಯಮಂತ್ರಿ ಹುದ್ದೆಯಲ್ಲಿದ್ದರು. ನಂತರ 2014ರಲ್ಲಿ ಪ್ರಧಾನಿಯಾಗಿ ಪದೋನ್ನತಿ ಹೊಂದಿ ಈವರೆಗೂ ಕಳೆದ 11 ವರ್ಷಗಳಿಂದ ಪ್ರಧಾನಿ ಹುದ್ದೆಯಲ್ಲಿ ಮುಂದುವರಿದಿದ್ದಾರೆ.
ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಸಂತಸ ವ್ಯಕ್ತಪಡಿಸಿರುವ ಮೋದಿ, ತಾವು ಮೊದಲ ಸಲ ಸಿಎಂ ಹಾಗೂ ಪ್ರಧಾನಿ ಆಗಿ ಪ್ರಮಾಣವಚನ ಸ್ವೀಕರಿಸಿದ ಫೋಟೋ ಹಂಚಿಕೊಂಡಿದ್ದಾರೆ. ಜನರ ಜೀವನ ಸುಧಾರಿಸುವುದು ಮತ್ತು ಈ ಮಹಾನ್ ರಾಷ್ಟ್ರದ ಪ್ರಗತಿಗೆ ಕೊಡುಗೆ ನೀಡುವುದು ನನ್ನ ನಿರಂತರ ಪ್ರಯತ್ನವಾಗಿದೆ. ಭಾರತವಾಸಿಗಳ ನಿರಂತರ ಆಶೀರ್ವಾದದಿಂದಾಗಿ ನಾನು ಸರ್ಕಾರದ ಮುಖ್ಯಸ್ಥನಾಗಿ 25ನೇ ವರ್ಷಕ್ಕೆ ಕಾಲಿಡುತ್ತಿದ್ದೇನೆ. ಭಾರತದ ಜನರಿಗೆ ನನ್ನ ಕೃತಜ್ಞತೆಗಳು. ಇಷ್ಟು ವರ್ಷಗಳಿಂದ, ಜನರ ಜೀವನವನ್ನು ಸುಧಾರಿಸಲು ಮತ್ತು ನಮ್ಮೆಲ್ಲರನ್ನೂ ಪೋಷಿಸಿದ ಈ ಮಹಾನ್ ರಾಷ್ಟ್ರದ ಪ್ರಗತಿಗೆ ಕೊಡುಗೆ ನೀಡಲು ನಾನು ನಿರಂತರವಾಗಿ ಪ್ರಯತ್ನಿಸುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.
ಗುಜರಾತ್‌ನಲ್ಲಿ ಸತತ 3 ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿಯನ್ನು ಗೆಲುವಿನತ್ತ ಮುನ್ನಡೆಸಿದ ನಂತರ, ಅವರು ಬಿಜೆಪಿ ನೇತೃತ್ವದ ಎನ್‌ಡಿಎ (NDA) ಒಕ್ಕೂಟವನ್ನು ಸತತ 3 ರಾಷ್ಟ್ರೀಯ ಚುನಾವಣೆಗಳಲ್ಲಿ ಗೆಲ್ಲಿಸಿದ್ದಾರೆ. ಮೋದಿ ಎಂದಿಗೂ ಚುನಾವಣಾ ಸೋಲನ್ನು ಎದುರಿಸಿಲ್ಲ. 13 ವರ್ಷ ಮುಖ್ಯಮಂತ್ರಿ ಹಾಗೂ 11 ವರ್ಷ ಪ್ರಧಾನಮಂತ್ರಿಯಾಗಿ ಅತೀ ದೀರ್ಘಾವಧಿಗೆ ನಿರಂತರವಾಗಿ ಅಧಿಕಾರದಲ್ಲಿರುವ ಅಂದರೆ ಸರ್ಕಾರದ ಮುಖ್ಯಸ್ಥ ಆಗಿರುವ ಏಕೈಕ ವ್ಯಕ್ತಿ ಎಂಬ ಕೀರ್ತಿ ಮೋದಿ ಅವರಿಗಿದೆ.
