ಉದಯವಾಹಿನಿ, ವೆಸ್ಟ್ ಇಂಡೀಸ್ ವಿರುದ್ಧ ಟೆಸ್ಟ್ ಸರಣಿ ಗೆದ್ದಿರುವ ಟೀಮ್ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಗೆ ಸಜ್ಜಾಗಬೇಕಿದೆ. ಈ ಸರಣಿಗಾಗಿ ಈಗಾಗಲೇ ಭಾರತ ತಂಡವನ್ನು ಘೋಷಿಸಲಾಗಿದ್ದು, 15 ಸದಸ್ಯರುಗಳ ಬಳಗದಲ್ಲಿ ಯುವ ವೇಗಿ ಹರ್ಷಿತ್ ರಾಣಾ ಕೂಡ ಆಯ್ಕೆಯಾಗಿದ್ದಾರೆ. ರಾಣಾ ಅವರ ಈ ಆಯ್ಕೆ ಬಗ್ಗೆ ಟೀಮ್ ಇಂಡಿಯಾದ ಕೆಲ ಮಾಜಿ ಆಟಗಾರರು ಪ್ರಶ್ನೆಗಳೆನ್ನೆತ್ತಿದ್ದರು. ಅಲ್ಲದೆ ಹರ್ಷಿತ್ ರಾಣಾ ಅವರ ಆಯ್ಕೆಯನ್ನು ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಲಾಗಿತ್ತು. ಈ ಎಲ್ಲಾ ಟ್ರೋಲ್ಗಳಿಗೆ ಇದೀಗ ಟೀಮ್ ಇಂಡಿಯಾದ ಮುಖ್ಯ ಕೋಚ್ ಗೌತಮ್ ಗಂಭೀರ್ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯ ಬಳಿಕ ಸುದ್ದಿಗೋಷ್ಠಿಯಲ್ಲಿ ಕಾಣಿಸಿಕೊಂಡ ಗೌತಮ್ ಗಂಭೀರ್ ಅವರನ್ನು ಹರ್ಷಿತ್ ರಾಣಾ ಬಗ್ಗೆ ಕೇಳಲಾಯಿತು. ಈ ಪ್ರಶ್ನೆಗೆ ಉತ್ತರಿಸಿದ ಗಂಭೀರ್, ಆತ ಇನ್ನೂ 23 ವರ್ಷದ ಹುಡುಗ. ಅವನನ್ನು ವೈಯಕ್ತಿಕವಾಗಿ ಗುರಿಯಾಗಿಸಿಕೊಂಡಿರುವುದು ನಾಚಿಕೆಗೇಡಿನ ಸಂಗತಿ ಎಂದಿದ್ದಾರೆ.
ಹರ್ಷಿತ್ ರಾಣಾ ಅವರ ತಂದೆ ಯಾವುದೇ ಸಂಸ್ಥೆಯ ಮಾಜಿ ಅಧ್ಯಕ್ಷನಲ್ಲ, ಮಾಜಿ ಕ್ರಿಕೆಟಿಗ ಅಥವಾ ಅಧಿಕಾರಿಯಲ್ಲ. ಇದಾಗ್ಯೂ ಆತ ಇಂದು ಈ ಸ್ಥಾನಕ್ಕೇರಿದ್ದಾರೆ. ಇಲ್ಲಿತನಕ ತಲುಪಿರುವುದು ಸ್ವಂತ ಅರ್ಹತೆಯಿಂದ. ಆದ್ದರಿಂದ ಹರ್ಷಿತ್ನನ್ನು ಗುರಿಯಾಗಿಸುವುದು ಸಂಪೂರ್ಣವಾಗಿ ತಪ್ಪು. ಇದು ಸಾಮಾಜಿಕ ಮಾಧ್ಯಮ ಬಳಕೆದಾರರ ಮನಸ್ಥಿತಿಯನ್ನು ಬಹಿರಂಗಪಡಿಸುತ್ತದೆ ಎಂದು ಗೌತಮ್ ಗಂಭೀರ್ ಆಕ್ರೋಶ ಹೊರಹಾಕಿದ್ದಾರೆ.
