ಉದಯವಾಹಿನಿ , ಲಖನೌ: ಜನರಲ್ ಕಂಪಾರ್ಟ್‌ಮೆಂಟ್‌ನಲ್ಲಿ ಕುಳಿತುಕೊಳ್ಳಲು ಸೀಟ್ ಸಿಗದಿದ್ದಕ್ಕೆ ಕೋಪಗೊಂಡ ಸಹೋದರರಿಬ್ಬರು ರೈಲಿನಲ್ಲಿ ಬಾಂಬ್ ಇದೆ ಎಂದು ಕಂಟ್ರೋಲ್ ರೂಮ್‌ಗೆ ಕರೆ ಮಾಡಿ ಪೊಲೀಸರ ಅತಿಥಿಗಳಾಗಿದ್ದಾರೆ. ಹೌದು.. ಈ ಘಟನೆ ಉತ್ತರ ಪ್ರದೇಶದ ಎಟಾವಾ ಬಳಿ ನಡೆದಿದೆ. ಘಟಂಪುರದವರಾದ ದೀಪಕ್ ಚೌಹಾಣ್ ಸಹೋದರ ಅಂಕಿತ್ ಬಂಧಿತ ಆರೋಪಿಗಳಾಗಿದ್ದು, ಓರ್ವ ಲುಧಿಯಾನದಲ್ಲಿ ಮೆಕ್ಯಾನಿಕ್ ಆಗಿದ್ದರೆ ಮತ್ತೊಬ್ಬ ನೋಯ್ಡಾದ ಕಾರ್ಖಾನೆಯೊಂದರಲ್ಲಿ ಉದ್ಯೋಗಿಯಾಗಿದ್ದಾನೆ.
ದೆಹಲಿಯಲ್ಲಿ ರಾತ್ರಿ ಅಮೃತಸರ-ಕಟಿಹಾರ್ ಮಧ್ಯೆ ಸಂಚರಿಸುವ ಅಮ್ರಪಾಲಿ ಎಕ್ಸ್‌ಪ್ರೆಸ್ ರೈಲಿಗೆ ಹತ್ತಿದ್ದ ಇಬ್ಬರಿಗೂ ಜನರಲ್ ಕಂಪಾರ್ಟ್‌ಮೆಂಟ್‌ನಲ್ಲಿ ಆಸನ ಸಿಕ್ಕಿರಲಿಲ್ಲ. ಸುಮಾರು ನಾಲ್ಕು ಗಂಟೆಗಳ ಕಾಲ ಪ್ರಯಾಣಿಸಿದ ಬಳಿಕ ಆಸನಕ್ಕಾಗಿ ಇಬ್ಬರೂ ಇತರೆ ಪ್ರಯಾಣಿಕರೊಂದಿಗೆ ಜಗಳ ತೆಗೆದಿದ್ದಾರೆ. ಇದರಿಂದಾಗಿ ಕೋಪಗೊಂಡ ಇಬ್ಬರೂ ಹೇಗಾದರೂ ಮಾಡಿ ಸೀಟ್ ಪಡೆಯಲೇ ಬೇಕು ಎಂದು ಕಂಟ್ರೋಲ್ ರೂಮ್‌ಗೆ ಕರೆ ಮಾಡಿ ರೈಲಿನಲ್ಲಿ ಬಾಂಬ್ ಇದೆ ಎಂದು ಹೇಳಿದ್ದಾರೆ. ಇದರಿಂದಾಗಿ ಪ್ರಯಾಣಿಕರ ಭಯಗೊಂಡು ರೈಲಿನಿಂದ ಇಳಿದುಬಿಡುತ್ತಾರೆ, ಬಳಿಕ ನಮಗೆ ಸೀಟ್ ಸಿಗುತ್ತದೆ ಎಂದು ಅವರು ಭಾವಿಸಿದ್ದರು.
