ಉದಯವಾಹಿನಿ, ನಾಳೆ, ಅಕ್ಟೋಬರ್ 20ರಂದು ದೇಶಾದ್ಯಂತ ದೀಪಾವಳಿ ಆಚರಿಸಲಾಗುತ್ತದೆ. ಪಟಾಕಿಗಳು ಮತ್ತು ಹಣತೆಗಳು ಎಲ್ಲೆಡೆ ಸಾಮಾನ್ಯ ದೃಶ್ಯವಾಗಿ ಕಂಡು ಬರಲಿದೆ. ಆದರೆ, ದೀಪಾವಳಿಯ ಸಮಯದಲ್ಲಿ ಆಕಾಶವನ್ನು ಬೆಳಗಿಸುವ ಪಟಾಕಿಗಳಿಗೆ ಇನ್ನೊಂದು ಮುಖವೂ ಇದೆ. ಆ ಪಟಾಕಿಗಳು ವಾಯು ಮಾಲಿನ್ಯವನ್ನು ಹೇಗೆ ಸೃಷ್ಟಿಸುತ್ತದೆಯೋ, ಅವು ಉತ್ಪಾದಿಸುವ ಭಾರೀ ಗಾತ್ರದ ಶಬ್ದವು ಗಂಭೀರ ಆರೋಗ್ಯ ಅಪಾಯವನ್ನುಂಟುಮಾಡುತ್ತದೆ, ವಿಶೇಷವಾಗಿ ಹೃದಯ ಕಾಯಿಲೆ ಇರುವವರಿಗೆ. NIH ಸೇರಿದಂತೆ ಹಲವಾರು ಅಧ್ಯಯನಗಳು, ಹೆಚ್ಚಿನ ಡೆಸಿಬಲ್ ಶಬ್ದಕ್ಕೆ ನಿರಂತರವಾಗಿ ಒಡ್ಡಿಕೊಳ್ಳುವುದರಿಂದ ಹೃದಯಾಘಾತದಂತಹ ಹೃದಯ ಸಮಸ್ಯೆಗಳ ಅಪಾಯ ಹೆಚ್ಚಾಗುತ್ತದೆ ಎಂದು ಎಚ್ಚರಿಕೆ ನೀಡಿವೆ. ದೀಪಾವಳಿ ಪಟಾಕಿಗಳ ಜೋರಾದ ಶಬ್ದವು ಹೃದಯಾಘಾತದ ಅಪಾಯವನ್ನು ಹೇಗೆ ಹೆಚ್ಚಿಸುತ್ತದೆ ಮತ್ತು ಈ ಸಮಯದಲ್ಲಿ ನಿಮ್ಮ ಹೃದಯದ ಆರೋಗ್ಯವನ್ನು ನೀವು ಹೇಗೆ ಕಾಳಜಿ ಮಾಡಬಹುದು ಅನ್ನೋದರ ವಿವರ ಇಲ್ಲಿದೆ.
ವಾಸ್ತವದಲ್ಲಿ, ಪಟಾಕಿಗಳ ಶಬ್ದವು 4 ಮೀಟರ್ ದೂರದಲ್ಲಿ 130 ರಿಂದ 143 ಡೆಸಿಬಲ್‌ಗಳನ್ನು ತಲುಪುತ್ತದೆ, ಇದು ಸಾಮಾನ್ಯ ಶ್ರವಣ ಮಿತಿಗಿಂತ ಹೆಚ್ಚಿನದಾಗಿದೆ. ಅಂತಹ ದೊಡ್ಡ ಶಬ್ದಗಳು ದೇಹದ ಒತ್ತಡದ ಪ್ರತಿಕ್ರಿಯೆಯನ್ನು ಪ್ರಚೋದಿಸುತ್ತವೆ, ಇದು ರಕ್ತದೊತ್ತಡವನ್ನು ಹೆಚ್ಚಿಸುತ್ತದೆ, ಹೃದಯ ಬಡಿತವನ್ನು ವೇಗಗೊಳಿಸುತ್ತದೆ ಮತ್ತು ಹೃದಯದ ಮೇಲೆ ಹೆಚ್ಚಿನ ಒತ್ತಡವನ್ನುಂಟು ಮಾಡುತ್ತದೆ. ಅಂತಹ ಪರಿಸ್ಥಿತಿಗಳಿಗೆ ದೀರ್ಘಕಾಲದವರೆಗೆ ಅಥವಾ ಪದೇ ಪದೇ ಒಡ್ಡಿಕೊಳ್ಳುವುದರಿಂದ ಹೃದ್ರೋಗದ ಅಪಾಯ ಹೆಚ್ಚಾಗುತ್ತದೆ, ಇದು ಹೃದಯಾಘಾತಕ್ಕೂ ಕಾರಣವಾಗಬಹುದು.
