ಉದಯವಾಹಿನಿ, ನವದೆಹಲಿ: ಬಂಗಾಳಕೊಲ್ಲಿಯ ಆಗ್ನೇಯ ಭಾಗದಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಆಂಧ್ರಪ್ರದೇಶ ಹಾಗೂ ಒಡಿಶಾಕ್ಕೆ ಮೊಂಥಾ ಚಂಡಮಾರುತ ಅಪ್ಪಳಿಸಲಿದೆ. ಪರಿಣಾಮ ಕರ್ನಾಟಕ, ತಮಿಳುನಾಡಿನಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಆಂಧ್ರಪ್ರದೇಶ ಹಾಗೂ ಒಡಿಶಾ ಕರಾವಳಿ ತೀರ ಪ್ರದೇಶಕ್ಕೆ ಮೊಂಥಾ ಚಂಡಮಾರುತ 110 ಕಿ.ಮೀ ವೇಗದಲ್ಲಿ ಅಪ್ಪಳಿಸಲಿದ್ದು, ಇಡೀ ರಾಜ್ಯದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ರಾಜ್ಯದ 26 ಜಿಲ್ಲೆಗಳ ಪೈಕಿ 23 ಜಿಲ್ಲೆಗಳಿಗೆ ರೆಡ್ ಮತ್ತು ಆರೆಂಜ್ ಅಲರ್ಟ್ ನೀಡಲಾಗಿದೆ. ಧಾರಾಕಾರ ಮಳೆ, ಅತೀ ವೇಗದ ಗಾಳಿ ಮತ್ತು ಸಂಭವನೀಯ ಪ್ರವಾಹದ ಸಾಧ್ಯತೆ ಇದೆ ಎಂದು ಹವಾಮಾವ ಇಲಾಖೆ ತಿಳಿಸಿದೆ.
ಕಾಕಿನಾಡ ಬಳಿಯ ಮಚಲಿಪಟ್ನಂ ಮತ್ತು ಕಳಿಂಗಪಟ್ನಂ ನಡುವೆ ಭೂಕುಸಿತ ಉಂಟಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಕಾಕಿನಾಡ, ಕೋನ ಸೀಮಾ, ಎಲುರು, ಪಶ್ಚಿಮ ಗೋದಾವರಿ, ಕೃಷ್ಣ, ಗುಂಟೂರು, ಬಾಪಟ್ಲಾ, ಪ್ರಕಾಶಂ ಮತ್ತು ಎಸ್‌ಪಿಎಸ್‌ಆರ್ ನೆಲ್ಲೂರು ಸೇರಿದಂತೆ ಹಲವು ಜಿಲ್ಲೆಗಳಿಗೆ ಎಚ್ಚರಿಕೆ ನೀಡಲಾಗಿದೆ. ಮಳೆ ಮುನ್ಸೂಚನೆ ಹಿನ್ನೆಲೆ ಆಂಧ್ರಪ್ರದೇಶದ ಎಲ್ಲಾ ಶಾಲೆಗಳನ್ನು ಮುಚ್ಚುವಂತೆ ನಿರ್ದೇಶಿಸಲಾಗಿದೆ. ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಿದೆ. ಸಮುದ್ರ ತೀರ ಪ್ರದೇಶಗಳಲ್ಲಿನ ಜನರನ್ನು ಸ್ಥಳಾಂತರ ಮಾಡಿದ್ದು, ಆಶ್ರಯ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.
