ಉದಯವಾಹಿನಿ, ಬೆಂಗಳೂರು: ಯಾವುದೇ ಸರ್ಕಾರ ಬಂದರೂ ನಿಮ್ಮ ಆತ್ಮವಿಶ್ವಾಸ ಹಾಗೂ ಕರ್ತವ್ಯ ನಿಷ್ಠೆಯಲ್ಲಿ ರಾಜಿಯಾಗಬಾರದು. ಒಂದು ವೇಳೆ ರಾಜಿ ಮಾಡಿಕೊಂಡರೆ ಸಂಪೂರ್ಣವಾಗಿ ವ್ಯವಸ್ಥೆ ಕುಸಿಯಲಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಪೊಲೀಸ್ ಅಧಿಕಾರಿಗಳಿಗೆ ಕಿವಿಮಾತು ಹೇಳಿದ್ದಾರೆ.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಮಂಗಳವಾರ ಪೊಲೀಸ್ ಸಿಬ್ಬಂದಿ ಪೀಕ್ ಕ್ಯಾಪ್ ಪರಿಚಯ ಮತ್ತು ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಸಮಾಜ ಹಾಗೂ ಸರ್ಕಾರ ಪೊಲೀಸರ ಮೇಲೆ ಬಹಳ ವಿಶ್ವಾಸ ಇಟ್ಟಿರುತ್ತದೆ. ನೀವೇ ಸಮಾಜ ರಕ್ಷಕರು. ನಾವು ಅಧಿಕಾರಕ್ಕೆ ಬಂದು ಪ್ರಮಾಣ ವಚನ ಸ್ವೀಕಾರ ಮಾಡುವ ವೇಳೆ ನಾನು ಸ್ವಲ್ಪ ಖಾರವಾಗಿಯೇ ಮಾತನಾಡಿದ್ದೆ ಎಂದಿದ್ದಾರೆ.
ನೀವೆಲ್ಲರೂ ನಿಮ್ಮ ಸಮವಸ್ತ್ರವನ್ನು ಶಿಸ್ತಿನಿಂದ ಧರಿಸಿ, ಆತ್ಮವಿಶ್ವಾಸದಲ್ಲಿ ಕೂತಿದ್ದೀರಿ. ಆದರೆ ಕಳೆದ ಸರ್ಕಾರದ ಅವಧಿಯಲ್ಲಿ ಆಯುಧಪೂಜೆ ಸಂದರ್ಭ ಕೆಲವರು ವಿಜಯಪುರ ಹಾಗೂ ಉಡುಪಿಯಲ್ಲಿ ಸಮವಸ್ತ್ರ ತೆಗೆದು ಕೇಸರಿ ವಸ್ತ್ರ ಧರಿಸಿದ್ದರು. ರಾಜಕೀಯ ಒತ್ತಡ ಅಥವಾ ಬೇರೆಯವರನ್ನು ಮೆಚ್ಚಿಸಲು ಈ ರೀತಿ ಮಾಡಿದರೆ ನಿಮ್ಮನ್ನು ನೀವು ಮಾರಿಕೊಂಡಂತೆ. ನಿಮ್ಮ ವ್ಯಕ್ತಿತ್ವ, ಇಲಾಖೆಗೆ ಇರುವ ಘನತೆ ನಾಶವಾಗುತ್ತದೆ. ನೀವುಗಳು ರಾಜಕೀಯ ಹಿಂಬಾಲಕರಾಗುತ್ತೀರಿ. ಆಗ ನಿಮ್ಮನ್ನು ಯಾರು ನಂಬುತ್ತಾರೆ? ಹೀಗಾಗಿ ಇಂತಹ ಪದ್ಧತಿಗೆ ನೀವು ಯಾವುದೇ ಕಾರಣಕ್ಕೂ ಅವಕಾಶ ಮಾಡಿಕೊಡಬೇಡಿ ಎಂದು ನುಡಿದಿದ್ದಾರೆ.

ನಗರದ ಮನೆಗೆಲಸದವರ ನೋಂದಣಿ, ದಾಖಲೆ ಬಗ್ಗೆ ಗಮನ: ಫೋನ್ ಬಂದ ಬಳಿಕ ಸೈಬರ್ ಅಪರಾಧ ಹೆಚ್ಚಾಗಿವೆ. ಇದನ್ನು ಹತೋಟಿಗೆ ತರಲು, ಮೇಲಾಧಿಕಾರಿಗಳು ಮಾತ್ರವಲ್ಲ, ಕೆಳ ಹಂತದ ಅಧಿಕಾರಿಗಳು ತಯಾರಾಗಬೇಕು. ಬೆಂಗಳೂರು ನಗರ ಹಾಗೂ ಇತರೇ ನಗರ ಪ್ರದೇಶಗಳಲ್ಲಿ ಪ್ರತಿ ಮನೆಯಲ್ಲಿ ಮನೆಗೆಲಸದವರು, ಚಾಲಕರು, ಕಾವಲುಗಾರರ ನೋಂದಣಿ ಇಟ್ಟುಕೊಳ್ಳಬೇಕು. ಆಗ ಎಷ್ಟೋ ಮಟ್ಟಿಗೆ ಅಪರಾಧ ನಿಯಂತ್ರಣಕ್ಕೆ ಬರುತ್ತದೆ ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!