ಉದಯವಾಹಿನಿ, ಪುಣೆ: ಅಲ್ ಖೈದಾ ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಹೊಂದಿರುವ ಆರೋಪದ ಮೇಲೆ ಟೆಕ್ಕಿಯೊಬ್ಬನನ್ನು ಭಯೋತ್ಪಾದನಾ ನಿಗ್ರಹ ದಳ ಪುಣೆಯ ಕೊಂಧ್ವಾದಲ್ಲಿ ಬಂಧಿಸಿದೆ. ಬಂಧಿತ ಆರೋಪಿಯನ್ನು ಜುಬೈರ್ ಹಂಗರ್ಗೇಕರ್ ಎಂದು ಗುರುತಿಸಲಾಗಿದೆ. ಈತನ ಮೇಲೆ ಕಳೆದ ತಿಂಗಳಿನಿಂದ ಎಟಿಎಸ್ ಸಿಬ್ಬಂದಿ ತೀವ್ರ ನಿಗಾ ಇಟ್ಟಿದ್ದರು. ಬಂಧನದ ಬಳಿಕ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ವಿಶೇಷ ಯುಎಪಿಎ ನ್ಯಾಯಾಲಯ ಆರೋಪಿಯನ್ನು ನ.4 ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.
ಈತ ಯುವಕರನ್ನು ಮೂಲಭೂತವಾದಿಗಳನ್ನಾಗಿ ಮಾಡುವಲ್ಲಿ ಪಾತ್ರ ವಹಿಸಿದ್ದಾನೆ. ಅಲ್ಲದೇ ನಗರಗಳಲ್ಲಿ ಭಯೋತ್ಪಾದಕ ದಾಳಿ ನಡೆಸಲು ಸಂಚು ರೂಪಿಸುತ್ತಿದ್ದ ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಆರೋಪಿಯ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳು (ತಡೆಗಟ್ಟುವಿಕೆ) ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅ.9 ರಂದು ಎಟಿಎಸ್ ಪುಣೆಯ ಹಲವು ಸ್ಥಳಗಳ ಮೇಲೆ ದಾಳಿ ನಡೆಸಿತ್ತು. ಈ ವೇಳೆ ಭಯೋತ್ಪಾದಕ ಜಾಲದ ಸುಳಿವು ನೀಡುವ ಎಲೆಕ್ಟ್ರಾನಿಕ್ ಸಾಧನಗಳು, ದಾಖಲೆಗಳು ಮತ್ತು ವಸ್ತುಗಳನ್ನು ಪತ್ತೆಯಾಗಿದ್ದವು. ಈ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ.

Leave a Reply

Your email address will not be published. Required fields are marked *

error: Content is protected !!