ಉದಯವಾಹಿನಿ, ಇಂದಿನ ದಿನಗಳಲ್ಲಿ ಬರಿ ಗನ್, ಯುದ್ಧ ಟ್ಯಾಂಕರ್, ಬಾಂಬ್, ಅಣ್ವಸ್ತ್ರಗಳನ್ನು ಬಳಸಿ ಮಾತ್ರ ಯುದ್ಧ ಮಾಡಲಾಗುತ್ತಿಲ್ಲ. ಅದು ಬದಲಾಗಿ ಹೊಸ ಹೊಸ ತಂತ್ರ, ಕುತಂತ್ರಗಳಿಗೂ ತಿರುಗಿದೆ. ಅದರಲ್ಲಿ ಆಹಾರ ಆಯುಧೀಕರಣವೂ ಒಂದು. ಹೌದು ಆಹಾರವನ್ನು ಆಯುಧೀಕರಿಸಲಾಗುತ್ತಿದೆ. ಇದಕ್ಕೆ ತಂತ್ರಜ್ಞಾನ, ಜಾಗತೀಕರಣ ಮತ್ತು ರಾಜಕೀಯ ಸಾಥ್ ಕೊಡುತ್ತಿದೆ. ಆಹಾರ ಹೇಗೆ ಯುದ್ಧದಲ್ಲಿ ಆಯುಧವಾಗಿ ಬಳಕೆಯಾಗುತ್ತಿದೆ ಎಂಬುದನ್ನು ಇಲ್ಲಿ ವಿವರಿಸಲಾಗಿದೆ.
ಆಹಾರ ಅಗ್ಗದ ಆಯುಧಗಳಲ್ಲಿ ಒಂದಾಗಿದೆ! ಆಹಾರದ ಆಯುಧೀಕರಣ (Weapon) ಎಂದರೆ ಉದ್ದೇಶಪೂರ್ವಕ ಆಹಾರದ ಕೊರತೆಯನ್ನು ಸೃಷ್ಟಿಸುವುದು. ಶತ್ರು ದೇಶಕ್ಕೆ ಸರಬರಾಜಾಗುವ ಆಹಾರದ ಸಾಮಾಗ್ರಿಗಳನ್ನು ಪೂರೈಕೆ ಆಗದಂತೆ ನಿರ್ಬಂಧಿಸುವುದು. ಅಂದರೆ ಆಹಾರ ಸಾಮಾಗ್ರಿಗಳನ್ನು ತಲುಪದಂತೆ ನೆಲ, ಜಲ, ವಾಯು ಗಡಿಯನ್ನು, ಮಾರ್ಗಗಳನ್ನು ಮುಚ್ಚುವುದಾಗಿದೆ. ಇದು ಯುದ್ಧ ಭೂಮಿ ಮಾತ್ರವಲ್ಲದೇ ದೇಶದ ಒಳಗೆ ಇರುವ ಸಾವಿರಾರು, ಲಕ್ಷಾಂತರ ಜನರ ಸಾವಿಗೆ ಕಾರಣ ಆಗಬಹುದು. ಪ್ರಸ್ತುತ ಯುದ್ದ ಪೀಡಿತ ದೇಶಗಳಲ್ಲಿ ಹಸಿವಿನಿಂದಾಗಿ 12 ಕೋಟಿಗಿಂತಲೂ ಹೆಚ್ಚು ಜನರು ಸ್ಥಳಾಂತರಗೊಂಡಿದ್ದಾರೆ. ಸಾವಿರಾರು ಜನ ಸಾವಿಗೀಡಾಗಿದ್ದಾರೆ.
ಸುಡಾನ್‌ನ್ನು ಸುಡುತ್ತಿರುವ ಹಸಿವು: ಸುಡಾನ್‌ನಲ್ಲಿ ಸಶಸ್ತ್ರ ಪಡೆ ಮತ್ತು ಅರೆಸೇನಾ ಪಡೆಗಳ ನಡುವೆ ನಡೆಯುತ್ತಿರುವ ಆಂತರಿಕ ಗಲಭೆಯಿಂದ ಸಾವಿರಾರು ಜನ ಸಾವಿಗೀಡಾಗಿದ್ದಾರೆ. ಈ ಎರಡು ಪಡೆಗಳು ಜನರಿಗೆ ಒದಗಿಸುವ ಸಹಾಯವನ್ನು ನಿರ್ಬಂಧಿಸುತ್ತಿವೆ. ಅಲ್ಲದೇ ಆಹಾರ ಸರಬರಾಜು ಮಾಡುವ ವಾಹನಗಳನ್ನು ನಾಶಮಾಡುತ್ತಿವೆ. ಜನರ ಮೇಲೆ ದಾಳಿ ಮಾಡುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಚಾಡ್‌ನಂತಹ ನೆರೆಯ ದೇಶಗಳಿಗೆ ಅಲ್ಲಿನ ಜನ ಸಾಮೂಹಿಕ ವಲಸೆ ಬಂದಿದ್ದು, ಆಹಾರಕ್ಕಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
