
ಉದಯವಾಹಿನಿ, ಇಸ್ಲಾಮಾಬಾದ್: ನವದೆಹಲಿಯು ತನ್ನ ದೇಶದಲ್ಲಿ ಭಯೋತ್ಪಾದನೆಯನ್ನು ಹರಡಲು ಕಾಬೂಲ್ ಅನ್ನು ಸಾಧನವಾಗಿ ಬಳಸುತ್ತಿದೆ ಎಂದು ಆರೋಪಿಸಿರುವ ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್, ಅಫ್ಗಾನಿಸ್ತಾನ ಇಸ್ಲಾಮಾಬಾದ್ ಮೇಲೆ ದಾಳಿ ಮಾಡಿದರೆ ’50 ಪಟ್ಟು ಬಲವಾದ’ ಪ್ರತಿಕ್ರಿಯೆ ನೀಡಲಾಗುತ್ತದೆ ಎಂದು ಎಚ್ಚರಿಸಿದ್ದಾರೆ.
ಜಿಯೋ ನ್ಯೂಸ್‌ನ ಪ್ರೈಮ್‌ಟೈಮ್ ಶೋ ‘ಆಜ್ ಶಹಜೇಬ್ ಖಾನ್ಜಾದಾ ಕೆ ಸಾಥ್’ ನಲ್ಲಿ ಮಾತನಾಡಿದ ಅವರು, ಶಾಂತಿ ಒಪ್ಪಂದದಿಂದ ಪದೇ ಪದೆ ಹಿಂದೆ ಸರಿಯುತ್ತಿರುವ ಆಫ್ಘನ್ ಸಂಧಾನಕಾರರನ್ನು ತರಾಟೆಗೆ ತೆಗೆದುಕೊಂಡರು. ಇಸ್ತಾನ್‌ಬುಲ್‌ನಲ್ಲಿ ಪಾಕಿಸ್ತಾನ ಮತ್ತು ಅಫ್ಗಾನಿಸ್ತಾನ ನಡುವಿನ ಶಾಂತಿ ಮಾತುಕತೆಗಳು ನಾಟಕೀಯವಾಗಿ ಕೊನೆಗೊಂಡ ನಂತರ ಈ ಹೇಳಿಕೆಗಳು ಬಂದಿವೆ.
‘ಎರಡೂ ಕಡೆಯವರು ಒಪ್ಪಂದಕ್ಕೆ ಬರುವ ಪ್ರತಿ ಬಾರಿಯೂ (ಕಳೆದ ನಾಲ್ಕು ದಿನಗಳಲ್ಲಿ ಅಥವಾ ಕಳೆದ ವಾರ), ಸಂಧಾನಕಾರರು ತಮ್ಮ ಪ್ರಗತಿಯನ್ನು ವರದಿ ಮಾಡಲು ಕಾಬೂಲ್‌ಗೆ ಹೋಗುತ್ತಿದ್ದರು. ಆದರೆ, ಅವರು ಹಾಗೆ ಮಾಡಿದ ನಂತರ, ಕಾಬೂಲ್‌ನಲ್ಲಿ ಯಾರೋ ಮಧ್ಯಪ್ರವೇಶಿಸಿ ಒಪ್ಪಂದವನ್ನು ಅಂತಿಮಗೊಳಿಸುವುದನ್ನು ನಿಲ್ಲಿಸುತ್ತಿದ್ದರು’ ಎಂದು ಆಸಿಫ್ ವಿವರಿಸಿರುವುದಾಗಿ ಡಾನ್ ವರದಿ ಮಾಡಿದೆ. ‘ಮಾತುಕತೆಗಳನ್ನು ಹಾಳುಮಾಡಲಾಗಿದೆ ಎಂದು ನಾನು ನಂಬುತ್ತೇನೆ. ಮೊದಲಿಗೆ ಒಪ್ಪಂದಕ್ಕೆ ನಿರ್ಧರಿಸಲಾಗಿತ್ತು, ಆದರೆ ನಂತರ ಅವರು ಕಾಬೂಲ್‌ಗೆ ಕರೆ ಮಾಡಿ ಒಪ್ಪಂದದಿಂದ ಹಿಂದೆ ಸರಿದರು’ ಎಂದು ದೂರಿದ್ದಾರೆ.
ಕಾಬೂಲ್ ಈ ಹಿಂದೆ ಇಸ್ಲಾಮಾಬಾದ್‌ನ ಇದೇ ರೀತಿಯ ಆರೋಪಗಳನ್ನು ಆಧಾರರಹಿತವೆಂದು ತಳ್ಳಿಹಾಕಿತ್ತು. ಆದಾಗ್ಯೂ, ಪಾಕಿಸ್ತಾನಿ ಸಚಿವರು ಅಫ್ಗಾನಿಸ್ತಾನದ ಸಂಧಾನಕಾರರನ್ನು ಶ್ಲಾಘಿಸಿದರು ಮತ್ತು ಕಾಬೂಲ್ ನಾಯಕತ್ವದ ವಿರುದ್ಧ ಕಿಡಿಕಾರಿದರು.
