ಉದಯವಾಹಿನಿ, ಬೆಂಗಳೂರು: ಚಳಿಗಾಲಕ್ಕೂ ಹುಳಿ ತೇಗಿನ ಸಮಸ್ಯೆಗಳಿಗೂ ನೇರವಾದ ನಂಟಿಲ್ಲದಿರಬಹುದು. ಆದರೆ ಚಳಿಯೆಂದು ಹೆಚ್ಚು ಬಿಸಿಯಿರುವ ಆಹಾರ ಸೇವಿಸುವುದಕ್ಕೂ, ಖಾರದ ಮತ್ತು ಮಸಾಲೆಯುಕ್ತ ತಿನಿಸುಗಳನ್ನು ತಿನ್ನುವುದಕ್ಕೂ ಹೊಂದಿಕೆಯಾಗಿ ಹೊಟ್ಟೆಯ ತೊಂದರೆ ತಾರಕಕ್ಕೇರುತ್ತದೆ. ಜೀವನಶೈಲಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವುದರಿಂದ ಇದನ್ನು ತಹಬಂದಿಗೆ ತರಬಹುದು. ಏನೆಲ್ಲ ಮಾಡುವುದು ಪ್ರಯೋಜನಕಾರಿ ಎನ್ನುವುದನ್ನು ನೋಡೋಣ.
ಚಳಿ ಎಳುತ್ತಿದ್ದಂತೆ ಬಿಸಿಬಿಸಿ ಬಜ್ಜಿ, ಬೋಂಡಾಗಳ ನೆನಪಾಗುತ್ತದೆ. ಕ್ರಿಸ್‌ಮಸ್ ನೆವದಲ್ಲಿ ಕ್ರೀಮ್‌ಭರಿತ ಪೇಸ್ಟ್ರಿಗಳು ಇಲ್ಲದಿದ್ದರೆ ಹೇಗೆ? ಕೆನೆ ಅಥವಾ ಜಿಡ್ಡಿರುವ ಮಸಾಲೆಯ ಗ್ರೇವಿಗಳು ಹೆಚ್ಚು ಕಾಲ ಬಿಸಿ ಇರಬಲ್ಲವು. ಖಾರದ ಪಲ್ಯ ಹೊಂದಿದ ಉಗಿ ಹಾಯುವ ಮಸಾಲೆ ದೋಸೆಯನ್ನು ಮರೆಯಬಹುದೇ? ಚೀಸ್‌ಭರಿತ ಸುಡುಸುಡು ಪಿಜ್ಜಾ ಮತ್ತೂ ರುಚಿಕರ. ಇವುಗಳ ಬೆನ್ನಿಗೊಂದು ಹಾಟ್ ಚಾಕಲೇಟ್ ಅಥವಾ ಬಿಸಿ ಕಾಫಿ ಇಲ್ಲವೇ ಖಡಕ್ ಚಹಾ ಇದ್ದರೆ… ಸಾಲದೇ ಸ್ವರ್ಗಕ್ಕೆ ಕಿಚ್ಚು ಹಚ್ಚಲು! ಸ್ವರ್ಗದ ವಿಷಯ ಗೊತ್ತಿಲ್ಲ, ಆದರೆ ಹೊಟ್ಟೆಗೆ ಕಿಚ್ಚು ಹಚ್ಚಲಂತೂ ಸಾಕು.
ಚಳಿಯಲ್ಲಿ ಖಾರದ, ಜಿಡ್ಡಿನ, ಎಣ್ಣೆಯ, ಸುಡು ಬಿಸಿಯ ತಿನಿಸುಗಳ ಆಸೆಯಾದರೂ ಕಡಿವಾಣ ಹಾಕುವುದು ಅಗತ್ಯ. ಇವೆಲ್ಲವೂ ಒಟ್ಟಾಗಿ ಹೊಟ್ಟೆಯ ಅವಸ್ಥೆಯನ್ನು ಹದಗೆಡಿಸುತ್ತವೆ. ಆಹಾರ ಹದವಾದ ಬಿಸಿಯಿದ್ದು ತಾಜಾ ಇರಲಿ. ಖಾರ, ಮೆಣಸು, ಮಸಾಲೆಯ ಅಂಶಗಳಿಗೆ ಮಿತಿ ಇರಲಿ. ಆಹಾರದಲ್ಲಿ ಎಣ್ಣೆ, ಜಿಡ್ಡು ಕಡಿಮೆ ಆದಷ್ಟೂ ಅನುಕೂಲ ಆರೋಗ್ಯಕ್ಕೆ.
ಚುಮುಚುಮು ಚಳಿಯಲ್ಲಿ ಬೆಳಗ್ಗೆ ಏಳಲಾಗದು. ಎದ್ದರೂ ಕೈಕಾಲು ಸರಿಮಾಡಿಕೊಳ್ಳುವುದಕ್ಕೇ ಅರ್ಧ ಗಂಟೆ ಬೇಕು. ಇನ್ನು ವ್ಯಾಯಾಮ ಮಾಡುವುದೆಲ್ಲಿ? ಬೆಳಗಿನ ಅವಸ್ಥೆ ಹೀಗಾದರೆ, ಸಂಜೆಗೆ ಬೆನ್ನುಬೀಳುವ ಸೋಮಾರಿತನ, ಸುಸ್ತು ಅಥವಾ ಇನ್ನೇನೋ ಕಾರಣಗಳು. ಹಲವು ಪ್ರಾಣಿಗಳಂತೆ ದೇಹದ ಕೊಬ್ಬು ಹೆಚ್ಚಿಸಿಕೊಂಡು ಅಥವಾ ತುಪ್ಪಳ ಬೆಳೆಸಿಕೊಂಡು ಚಳಿಗಾಲ ಕಳೆಯುವ ಪರಿಸ್ಥಿತಿ ನಮಗಿಲ್ಲದಿದ್ದರೂ, ನಾವು ಮಾಡುವುದು ಮಾತ್ರ ಅದನ್ನೇ. ಹುಳಿ ತೇಗಿನ ಸಮಸ್ಯೆ ಇರುವವರಿಗೆ ದೇಹದ ತೂಕ ನಿರ್ವಹಿಸುವುದು ಮಹತ್ವದ್ದು. ತೂಕ ಹೆಚ್ಚಿದಂತೆ ಹೊಟ್ಟೆಯ ಸಮಸ್ಯೆಗಳ ಪಟ್ಟಿಯೂ ಹೆಚ್ಚುತ್ತಾ ಹೋಗುತ್ತದೆ.ಬೊಜ್ಜು ನಿಯಂತ್ರಣದತ್ತ ಗಮನ ಹರಿಸುವುದು ಮುಖ್ಯ.
