ಉದಯವಾಹಿನಿ, ಬಿದಿರು ಎನ್ನುತ್ತಿದ್ದಂತೆ ದೊಡ್ಡ ಮೆಳೆಗಳೇ ನಮಗೆ ನೆನಪಾಗುವುದು. ಆದರೆ ಈ ಬೃಹತ್ ಮೆಳೆಗಳೂ ಹಿಂದೊಮ್ಮೆ ಎಳೆಯವೇ ಆಗಿದ್ದವಲ್ಲ? ಅಂಥ ಎಳೆಯ ಬಿದಿರು ಅಥವಾ ಮೊಳಕೆಗಳನ್ನು ಕಳಲೆ ಎನ್ನಲಾಗುತ್ತದೆ. ನೈಸರ್ಗಿಕವಾಗಿ ಮಳೆಗಾಲದ ಆರಂಭದ ದಿನಗಳಲ್ಲಿ ಬಿದಿರು ಮೆಳೆಗಳ ಬುಡದಲ್ಲಿ ಕಾಣಸಿಗುವಂಥವು ಇವು. ಅವುಗಳನ್ನು ಮುರಿದು ತಂದು, ಶುಚಿ ಮಾಡಿ, ಸಂಸ್ಕರಿಸಿ, ಖಾದ್ಯ ಯೋಗ್ಯವನ್ನಾಗಿ ಮಾಡಲಾಗುತ್ತದೆ. ಗಮನಿಸಿ ತಾಜಾ ಕಳಲೆಗಳನ್ನು ಸರಿಯಾಗಿ ಸಂಸ್ಕರಿಸದಿದ್ದರೆ, ಆರೋಗ್ಯದ ಮೇಲೆ ಕೆಟ್ಟ ಪರಿಣಾಮಗಳು ಉಂಟಾಗುತ್ತವೆ. ಸೇವನೆಗೆ ಯೋಗ್ಯವಾದ ಇಂಥ ರುಚಿಕರ ಕಳಲೆಗಳನ್ನು ಸಾಂಪ್ರದಾಯಿಕವಾದ ಸಾಂಬಾರು, ಪಲ್ಯಗಳಿಂದ ಹಿಡಿದು, ಆಧುನಿಕ ಖಾದ್ಯಗಳವರೆಗೆ ನಾನಾ ರೀತಿಯಲ್ಲಿ ಉಪಯೋಗಿಸಲಾಗುತ್ತದೆ.
ಸಸ್ಯಾದಿಗಳ ಮೊಳಕೆ ಮತ್ತು ಚಿಗುರುಗಳು ಭರಪೂರ ಪೋಷಕಾಂಶಗಳಿಂದ ತುಂಬಿರುತ್ತವೆ. ಬೆಳೆಯುವ ಸಸ್ಯಗಳಿಗೆ ಬೇಕೆಂಬ ಕಾರಣಕ್ಕಾಗಿ ನಿಸರ್ಗವೇ ಸೃಷ್ಟಿಸಿಕೊಂಡಿರುವ ಮಾರ್ಗವಿದು. ಪ್ರಕೃತಿಯ ಈ ಕೃತಿ ಮಾನವರಿಗೂ ಲಾಭದಾಯಕವಾಗುವುದಿದೆ. ಕಾರಣ ಇವು ಪೌಷ್ಟಿಕತೆಯಲ್ಲಿ ಮಾತ್ರವಲ್ಲಿ ರುಚಿಯಲ್ಲೂ ಒಂದು ಕೈ ಮೇಲೆಯೇ ಇರುತ್ತವೆ. ಎಳೆಯ ಬಿದಿರು ಅಥವಾ ಕಳಲೆಯನ್ನೂ ಇದೇ ಪಟ್ಟಿಗೆ ಸೇರಿಸಿಕೊಳ್ಳಬಹುದು. ಏನಿವೆ ಇದನ್ನು ತಿನ್ನುವುದರ ಲಾಭಗಳು ಎಂಬುದನ್ನು ಅರಿಯೋಣ
ಏನಿವೆ ಇದರಲ್ಲಿ?: ಹಲವು ರೀತಿಯ ಪ್ರೊಟೀನ್‌ಗಳು, ಅಮೈನೊ ಆಮ್ಲಗಳು, ಪಿಷ್ಟ, ಜೀವಸತ್ವಗಳು, ಖನಿಜಗಳಿಂದ ಇದು ಸಂಪನ್ನವಾಗಿದ್ದು, ಕೊಬ್ಬಿನಂಶ ಬಹಳ ಕಡಿಮೆಯಿದೆ. ಸ್ಥೂಲವಾಗಿ ಹೇಳುವುದಾದರೆ, ಜೀರ್ಣಾಂಗಗಳ ಆರೋಗ್ಯ ವೃದ್ಧಿಸಿ, ಹೃದಯವನ್ನು ಕಾಪಾಡಿ, ಮೂಳೆ ಮತ್ತು ಚರ್ಮದ ಆರೋಗ್ಯವನ್ನು ವೃದ್ಧಿಸುತ್ತದೆ. ಮಾತ್ರವಲ್ಲ, ದೇಹದಲ್ಲಿ ಕೊಬ್ಬು ಕಡಿಮೆ ಮಾಡಲೂ ನೆರವಾಗುತ್ತದೆ. ಮಲಬದ್ಧತೆ ನಿವಾರಣೆ: ಇದರಲ್ಲಿ ಹೆಚ್ಚಿನ ಪ್ರಮಾಣದ ಸೆಲ್ಯುಲೋಸ್ ಅಂಶದಿಂದಾಗಿ, ಜಠರ ಮತ್ತು ಕರುಳಿನ ಕಾರ್ಯಕ್ಷಮತೆ ಹೆಚ್ಚುತ್ತದೆ. ಇದರಿಂದ ಆಹಾರ ಸುಲಭವಾಗಿ ಪಚನವಾಗುತ್ತದೆ ಮತ್ತು ಮಲಬದ್ಧತೆ ನಿವಾರಣೆಯಾಗಿ, ದೇಹದಲ್ಲಿ ಶೇಖರವಾದ ಕೊಬ್ಬೂ ಇಳಿಯುತ್ತದೆ. ಕಳಲೆಗೆ ಪ್ರೊಬಯಾಟಿಕ್ ಗುಣವೂ ಇರುವುದರಿಂದ, ಹೊಟ್ಟೆಯಲ್ಲಿರುವ ಉತ್ತಮ ಬ್ಯಾಕ್ಟೀರಿಯಾಗಳ ಸಂಖ್ಯೆಯನ್ನು ಹೆಚ್ಚಿಸುತ್ತದೆ.
