ಉದಯವಾಹಿನಿ, ನಮಗೆ ʻಶೀತʼ ಆಗದಿದ್ದರೆ ಚಳಿಗಾಲ ಒಳ್ಳೆಯದು ಎಂಬ ಮಾತಿದೆ. ಅಂದರೆ ನಮ್ಮ ಆರೋಗ್ಯ ಸರಿಯಿದ್ದರೆ ಋತುಮಾನಗಳನ್ನು ಆನಂದಿಸಬಹುದು. ನಮ್ಮದೇ ಆರೋಗ್ಯ ಕೈ ಕೊಟ್ಟರೆ…? ಆಗ ಎಲ್ಲ ಕಾಲವೂ ಕೇಡುಗಾಲವೇ. ಆರೋಗ್ಯ ರಕ್ಷಣೆಗೆ ಅಗತ್ಯವಾಗಿ ಬೇಕಾದಂಥ ಪೋಷಕಾಂಶಗಳು ನಮಗೆ ದೊರೆಯುತ್ತಿವೆ ಎಂಬುದು ಖಾತ್ರಿಯಾದರೆ ಉತ್ತಮ ಆರೋಗ್ಯವೂ ಖಾತ್ರಿಯಾದಂತೆ.
ವಿಟಮಿನ್ ಸಿ: ಚಳಿಗಾಲದಲ್ಲಿ ನಮಗೆ ಅಗತ್ಯವಾಗಿ ಬೇಕಾದಂಥ ಸತ್ವಗಳಲ್ಲಿ ವಿಟಮಿನ್ ಸಿ ಮುಖ್ಯವಾಗಿದ್ದು, ಶರೀರದ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುವುದಕ್ಕೆ ಇದು ಅತ್ಯಗತ್ಯ. ಜೊತೆಗೆ ಚಳಿಗಾಲದಲ್ಲಿ ಸಮಸ್ಯೆಯಾಗುವ ಇನ್ನೊಂದು ಭಾಗವೆಂದರೆ ಚರ್ಮ. ಇದರ ರಕ್ಷಣೆಗೂ ಸಿ ಜೀವಸತ್ವದ ಆವಶ್ಯಕತೆ ಅಧಿಕವಾಗಿದೆ.
ಇದರ ಮೂಲಗಳೇನು?: ಇದಕ್ಕಾಗಿ ಸೀಬೆ ಹಣ್ಣು, ಕಿವಿ, ಪಪ್ಪಾಯ, ನಿಂಬೆ ರಸ, ಕಿತ್ತಳೆ, ಬೆರ್ರಿಗಳು, ಬ್ರೊಕೊಲಿ, ಕ್ಯಾಪ್ಸಿಕಂ, ಮುಂತಾದವುಗಳಲ್ಲಿ ವಿಟಮಿನ್ ಸಿ ಹೇರಳವಾಗಿದೆ. ಇವುಗಳ (ವಿಟಮಿನ್ ಸಿ ಸೇರಿದಂತೆ) ಉತ್ಕರ್ಷಣ ನಿರೋಧಕಗಳು ಸೋಂಕುಗಳೊಂದಿಗೆ ಹೋರಾಡುವ ಸಾಮರ್ಥ್ಯವನ್ನು ಹೆಚ್ಚಿಸುತ್ತವೆ
ಜಿಂಕ್: ಜಂಕ್ ಮಾತ್ರ ಕೇಳಿ ಗೊತ್ತಿರುವವರಿಗೆ ಜಿಂಕ್ ಅಥವಾ ಸತು ಸ್ವಲ್ಪ ಹೊಸತೆನಿಸಬಹುದು. ಸತುವಿನ ಕೊರತೆಯಿಂದ ರೋಗ ನಿರೋಧಕ ಶಕ್ತಿ ಕುಂಠಿತವಾಗುತ್ತದೆ. ಚಳಿಗಾಲದಲ್ಲಿ ವೈರಸ್‌ಗಳು ದಾಳಿ ಇಡಲು ಇಷ್ಟು ಸಾಲದೇ? ದೇಹದ ಕೋಶಗಳ ಬೆಳವಣಿಗೆಗೆ ಮತ್ತು ರಿಪೇರಿಗೆ ಅಗತ್ಯವಾದ ಪೋಷಕಾಂಶವಿದು. ಹಾಗಾಗಿ ಜಿಂಕ್ ನಮ್ಮ ಆಹಾರದಲ್ಲಿ ಇರುವಂತೆ ನಿಗಾ ವಹಿಸುವುದು ಮುಖ್ಯ.
ಮೂಲಗಳೇನು?: ಆಹಾರದಿಂದ ಜಂಕ್ ಕಡಿಮೆ ಮಾಡಿದರೆ, ಜಿಂಕ್ ದೇಹಕ್ಕೆ ಒದಗಿಸುವುದು ಕಷ್ಟವಲ್ಲ. ಬೇಳೆ ಮತ್ತು ಇಡಿಕಾಳುಗಳು, ನಾನಾ ರೀತಿಯ ಬೀಜಗಳು, ಡೈರಿ ಉತ್ಪನ್ನಗಳು, ಲೀನ್ ಮೀಟ್, ಇಡೀ ಧಾನ್ಯಗಳು- ಇಂಥ ಎಲ್ಲಾ ಆಹಾರಗಳಲ್ಲೂ ಸತು ದೊರೆಯುತ್ತದೆ.
ಕಬ್ಬಿಣಾಂಶ: ಈ ಖನಿಜಕ್ಕೆ ದೇಹದಲ್ಲಿ ಬಹಳಷ್ಟು ಕೆಲಸಗಳಿವೆ ಮಾಡುವುದಕ್ಕೆ. ಕೆಂಪು ರಕ್ತ ಕಣಗಳನ್ನು ಉತ್ಪಾದನೆ ಮಾಡುವುದರಿಂದ ಹಿಡಿದು ಆಮ್ಲಜನಕವನ್ನು ದೇಹದೆಲ್ಲೆಡೆ ಸಾಗಿಸುವವರೆಗೆ ಎಲ್ಲದಕ್ಕೂ ಕಬ್ಬಿಣ ಅಗತ್ಯ. ಇದರ ಕೊರತೆಯಾದರೆ ರಕ್ತಹೀನತೆ ಗಂಟು ಬೀಳುತ್ತದೆ. ಆದರೆ ಕಬ್ಬಿಣದಂಶ ಹೇರಳವಾಗಿರುವಂಥ ಬಹಳಷ್ಟು ಆಹಾರಗಳು ನಮಗೆ ಲಭ್ಯವಿವೆ ಸುಲಭದಲ್ಲಿ. ಪಾಲಕ್‌ನಂಥ ಹಸಿರು ಸೊಪ್ಪುಗಳು, ಕೆಂಪು ಹರಿವೆಯಂಥವು, ಬೀಟ್‌ರೂಟ್, ನುಗ್ಗೆಕಾಯಿ, ಹಲವು ರೀತಿಯ ಬೀಜಗಳು, ಕಾಳುಗಳು, ಮೀನುಗಳು, ತೋಫು, ಕಿನೊವಾ ಮುಂತಾದವುಗಳಲ್ಲಿ ಕಬ್ಬಿಣದಂಶ ಧಾರಾಳವಾಗಿ ದೊರೆಯುತ್ತದೆ.
