ಉದಯವಾಹಿನಿ, ಬ್ಯಾಂಕ್ ಕೆಲಸ ಎಂದ್ರೆ ಮೊದಲು ನೆನಪಾಗೋದು ಕೈತುಂಬಾ ವೇತನ, ಸಾಕಷ್ಟು ರಜೆ, ಜೊತೆಗೆ ಉದ್ಯೋಗ ಭದ್ರತೆ. ಇದರಿಂದಾಗಿಯೇ ಸಾಕಷ್ಟು ಜನ ತಮ್ಮ ಶಿಕ್ಷಣ ಮುಗಿದ ಬಳಿಕ ಬ್ಯಾಂಕಿಂಗ್ ಎಕ್ಸಾಮ್ ಬರೆಯಲು ಮುಂದಾಗುತ್ತಾರೆ. ಹೇಗಾದ್ರೂ ಮಾಡಿ ಬ್ಯಾಂಕ್ನಲ್ಲಿ ಕೆಲಸ ಗಿಟ್ಟಿಸಿಕೊಳ್ಳಲೇಬೇಕು ಎಂದು ಕಾಯುತ್ತಿರುತ್ತಾರೆ. ಇಂಥವರಿಗೆ ಒಂದು ಸುವರ್ಣಾವಕಾಶ ಒದಗಿ ಬಂದಿದೆ. ಅದ್ರಲ್ಲೂ ತಮ್ಮ ರಾಜ್ಯದ ಬ್ಯಾಂಕ್ಗಳಲ್ಲೇ ಜಾಬ್ ಪಡೆಯಬೇಕು ಅನ್ನೋ ಸ್ಥಳೀಯ ಉದ್ಯೋಗಾಕಾಂಕ್ಷಿಗಳಿಗೆ ಕೇಂದ್ರ ಸರ್ಕಾರ ಗುಡ್ನ್ಯೂಸ್ ನೀಡಿದೆ.
ಕರ್ನಾಟಕ ಸೇರಿದಂತೆ ದಕ್ಷಿಣದ ರಾಜ್ಯಗಳಲ್ಲಿ ಭಾಷೆ ವಿಚಾರವಾಗಿ ಭಾರೀ ಫೈಟ್ ನಡೆಯುತ್ತಿದೆ. ದಕ್ಷಿಣದ ರಾಜ್ಯಗಳಲ್ಲಿ ಸ್ಥಳೀಯರು ವರ್ಸಸ್ ಅನ್ಯಭಾಷಿಕ ಬ್ಯಾಂಕ್ ಸಿಬ್ಬಂದಿ ನಡುವೆ ಜಟಾಪಟಿ ಇದ್ದೇ ಇದೆ. ಈ ಹೊತ್ತಲ್ಲೇ ಬ್ಯಾಂಕ್‌ಗಳು ಸ್ಥಳೀಯ ಭಾಷೆ ಬಲ್ಲವರನ್ನೇ ನೇಮಕ ಮಾಡಿಕೊಳ್ಳಬೇಕು. ಸ್ಥಳೀಯ ಭಾಷಾ ಜ್ಞಾನದ ಆಧಾರದಲ್ಲೇ ಅವರ ವೃತ್ತಿಪರತೆ ಅಳೆಯಬೇಕು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಈ ಸಂಬಂಧ ನೇಮಕಾತಿ ಹಾಗೂ ಮಾನವ ಸಂಪನ್ಮೂಲ ನೀತಿಗಳಲ್ಲಿ ಬದಲಾವಣೆಗೆ ಸೂಚಿಸಿದ್ದಾರೆ.
ಇತ್ತೀಚೆಗೆ ನಡೆದ 12ನೇ ಎಸ್‌ಬಿಐ ಬ್ಯಾಂಕಿಂಗ್ ಮತ್ತು ಅರ್ಥಶಾಸ್ತ್ರ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಸೀತಾರಾಮನ್ ಅವ್ರು, ಪ್ರತಿಯೊಂದು ಶಾಖೆಯಲ್ಲಿ ನೇಮಿಸಲಾಗುವ ಎಲ್ಲಾ ಸಿಬ್ಬಂದಿಗೆ ಅಲ್ಲಿನ ಭಾಷೆ ಅರ್ಥೈಸಿಕೊಳ್ಳುವ ಸಾಮರ್ಥ್ಯ ಇರಬೇಕು. ಬ್ಯಾಂಕಿನ ಹಿರಿಯ ಅಧಿಕಾರಿಗಳಿಗೆ ಸ್ಥಳೀಯ ಭಾಷೆ ಬರದೆ ಇರಬಹುದು. ಆದ್ರೆ ಬ್ರ್ಯಾಂಚ್ನಲ್ಲಿ ಉನ್ನತ ಹುದ್ದೆಯಲ್ಲಿರೋ ಆ ರಾಜ್ಯದ ಭಾಷೆಯನ್ನು ಅರಿತಿರುವುದು ಕಡ್ಡಾಯ. ಇದೇ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳಬೇಕು ಎಂದರು.
