ಉದಯವಾಹಿನಿ, ಇಂದಿನ ಮಕ್ಕಳೇ ನಾಳಿನ ರಾಷ್ಟ್ರದ ರುವಾರಿಗಳು. ಹೀಗಿರುವಾಗ ಈ ಮಕ್ಕಳನ್ನು (Children’s) ದೇಶದ ಆಸ್ತಿಯನ್ನಾಗಿ ಮಾಡುವುದು ಬಹಳ ಮುಖ್ಯ. ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಒಳ್ಳೆಯ ಶಿಕ್ಷಣ ನೀಡುವುದು ಬಹಳ ಮುಖ್ಯ. ಅಲ್ಲದೆ ಮಕ್ಕಳು ದೇಶದ ಭವಿಷ್ಯ, ಅವರನ್ನು ಉತ್ತಮವಾಗಿ ನೋಡಿಕೊಳ್ಳುವುದರ ಜೊತೆಗೆ ಅಗತ್ಯ ಶಿಕ್ಷಣವನ್ನು ಪೂರೈಸಬೇಕು ಎಂಬುದು ಸ್ವತಂತ್ರ ಭಾರತದ ಮೊದಲ ಪ್ರಧಾನಿ ಜವಾಹರಲಾಲ್‌ ನೆಹರು ಅವರ ಧ್ಯೇಯವಾಗಿತ್ತು. ಮಕ್ಕಳ ಬಗ್ಗೆ ಅಪಾರವಾದ ಪ್ರೀತಿಯನ್ನು ಹೊಂದಿದ್ದ ಇವರ ಜನ್ಮ ಜಯಂತಿಯಂದೇ ಮಕ್ಕಳ ಹಕ್ಕುಗಳು ಮತ್ತು ಶಿಕ್ಷಣದ ಮಹತ್ವವನ್ನು ಸಾರುವ ಸಲುವಾಗಿ ಭಾರತದಲ್ಲಿ ಮಕ್ಕಳ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಈ ದಿನದ ಇತಿಹಾಸ ಮತ್ತು ಮಹತ್ವದ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.

ಮಕ್ಕಳ ದಿನಾಚರಣೆಯ ಇತಿಹಾಸವೇನು?
1954 ರಲ್ಲಿ ವಿಶ್ವಸಂಸ್ಥೆಯು ನವೆಂಬರ್‌ 20 ರಂದು ಸಾರ್ವತ್ರಿಕ ಮಕ್ಕಳ ದಿನಾಚರಣೆಯನ್ನು ಆಚರಿಸಲು ಘೋಷಿಸಿತು. ಭಾರತವು ಇದೇ ದಿನ ಈ ದಿನವನ್ನು ಆಚರಿಸುತ್ತಿತ್ತು. ಆದರೆ 1964 ರಲ್ಲಿ ಪಂಡಿತ್‌ ಜವಾಹರಲಾಲದ ನೆಹರು ಅವರ ನಿಧನದ ನಂತರ ಭಾರತೀಯ ಸಂಸತ್ತು ನೆಹರೂರವರ ಮಕ್ಕಳ ಮೇಲಿನ ಪ್ರೀತಿಯನ್ನು ಸ್ಮರಿಸಲು ಅವರ ಜನ್ಮ ಜಯಂತಿಯನ್ನು ಮಕ್ಕಳ ದಿನವಾಗಿ ಆಚರಿಸುವ ನಿರ್ಣಯವನ್ನು ಅಂಗೀಕರಿಸಿತು. ಅಂದಿನಿಂದ ಪ್ರತಿವರ್ಷ ನವೆಂಬರ್‌ 14 ರಂದು ಮಕ್ಕಳ ದಿನಾಚರಣೆಯನ್ನು ಆಚರಿಸಲಾಗುತ್ತದೆ.

ಜವಾಹರಲಾಲ್‌ ನೆಹರೂ ಜನ್ಮಜಯಂತಿಯಂದೇ ಏಕೆ ಮಕ್ಕಳ ದಿನವನ್ನು ಆಚರಿಸಲಾಗುತ್ತದೆ?
ಸ್ವತಂತ್ರ ಭಾರತದ ಮೊದಲ ಪ್ರಧಾನಿಯಾದ ಪಂಡಿತ್‌ ಜವಾಹರ್‌ಲಾಲ್‌ ನೆಹರು ಅವರಿಗೆ ಮಕ್ಕಳೆಂದರೆ ಪಂಚಪ್ರಾಣ. ಮಕ್ಕಳು ಸಹ ಅವರು ಪ್ರೀತಿಯಿಂದ ನೆಹರು ಚಾಚಾ ಎಂದೇ ಕರೆಯುತ್ತಿದ್ದರು. ಮಕ್ಕಳ ಬಗ್ಗೆ ತುಂಬಾ ಒಲವನ್ನು ಹೊಂದಿದ್ದ ಅವರು, ಮಕ್ಕಳಿಗೆ ಸರಿಯಾದ ಮಾರ್ಗದರ್ಶನ, ಶಿಕ್ಷಣ ಮತ್ತು ಪ್ರೀತಿ ನೀಡಿದರೆ ಅವರು ದೇಶದ ಭವಿಷ್ಯವೂ ಉತ್ತಮವಾಗಿರುತ್ತದೆ ಎಂದು ನಂಬಿದ್ದರು. ಜೊತೆಗೆ ದೇಶದ ಮಕ್ಕಳುಗೆ ಅಗತ್ಯ ಶಿಕ್ಷಣವನ್ನು ಪೂರೈಸಬೇಕು ಎಂಬುದು ನೆಹರು ಅವರ ಮುಖ್ಯ ಧ್ಯೇಯವಾಗಿತ್ತು. ಮಕ್ಕಳ ಮೇಲಿರುವ ಅವರ ಈ ಪ್ರೀತಿಗಾಗಿ ಅವರ ಜನ್ಮ ಜಯಂತಿಯಂದು ಭಾರತದಲ್ಲಿ ಮಕ್ಕಳ ದಿನಾಚರಣೆಯನ್ನು ಆಚರಿಸಲಾಗುತ್ತದೆ.

ಮಕ್ಕಳ ದಿನಾಚರಣೆಯ ಮಹತ್ವವೇನು?
ಈ ದಿನ ಮಕ್ಕಳ ಶಿಕ್ಷಣ, ಹಕ್ಕುಗಳು ಹಾಗೂ ಕಾಳಜಿಯ ಬಗ್ಗೆ ಜಾಗೃತಿ ಮೂಡಿಸುವ ಒಂದು ವೇದಿಕೆಯಾಗಿದೆ.
ಮಕ್ಕಳ ದಿನಾಚರಣೆಯು ಪ್ರತಿಯೊಂದು ಮಗುವೂ ಸಮಾನ ಅವಕಾಶ, ಶಿಕ್ಷಣ, ಪ್ರೀತಿ ಮತ್ತು ರಕ್ಷಣೆಗೆ ಅರ್ಹವಾಗಿದೆ ಎಂದು ನಮಗೆ ಕಲಿಸುತ್ತದೆ.
ಈ ದಿನ ಮಕ್ಕಳ ಉಜ್ವಲ ಭವಿಷ್ಯದ ದೃಷ್ಟಿಯಿಂದ ಮಕ್ಕಳ ಹಕ್ಕುಗಳು ಮತ್ತು ಶಿಕ್ಷಣದ ಮಹತ್ವವನ್ನು ಸಾರಲಾಗುತ್ತದೆ.
ಅಲ್ಲದೆ ಈ ದಿನ ಜವಾಹರಲಾಲ್‌ ನೆಹರು ಅವರ ಸಾಧನೆಗಳನ್ನು ಸ್ಮರಿಸಲಾಗುತ್ತದೆ.
ಇದನ್ನೂ ಓದಿ: ವಿದ್ಯಾರ್ಥಿಗಳೇ… ಮಕ್ಕಳ ದಿನಾಚರಣೆಗೆ ಈ ರೀತಿ ಭಾಷಣ ಮಾಡಿ

ಮಕ್ಕಳ ದಿನಾಚರಣೆಯನ್ನು ಹೇಗೆ ಆಚರಿಸಲಾಗುತ್ತದೆ?
ಮಕ್ಕಳ ದಿನಾಚರಣೆಯ ಸಂದರ್ಭದಲ್ಲಿ, ದೇಶಾದ್ಯಂತ ಶಾಲೆಗಳು ಮತ್ತು ಶಿಕ್ಷಣ ಸಂಸ್ಥೆಗಳು ನಾಟಕ, ಹಾಡುಗಾರಿಕೆ, ಕ್ರೀಡಾ ಸ್ಪರ್ಧೆ, ಭಾಷಣ, ಛದ್ಮವೇಷ, ರಸಪ್ರಶ್ನೆ ಸೇರಿದಂತೆ ವಿವಿಧ ಸ್ಪರ್ಧೆ ಮತ್ತು ಕಾರ್ಯಕ್ರಮಗಳನ್ನು ಆಯೋಜಿಸುತ್ತವೆ. ಈ ದಿನ ನಡೆಯುವ ಚಟುವಟಿಕೆಗಳು ಮಕ್ಕಳಿಗೆ ಮನರಂಜನೆ ನೀಡುವುದಲ್ಲದೆ, ಜವಾಬ್ದಾರಿ ಮತ್ತು ನಾಯಕತ್ವದ ಮಹತ್ವವನ್ನು ಅನುಭವಿಸಲು ಸಹಾಯ ಮಾಡುತ್ತದೆ.

Leave a Reply

Your email address will not be published. Required fields are marked *

error: Content is protected !!