ಉದಯವಾಹಿನಿ, ರಾಯಚೂರು: ಶೈಕ್ಷಣಿಕವಾಗಿ ಹಿಂದುಳಿದ ಕಲ್ಯಾಣ ಕರ್ನಾಟಕ ಭಾಗದಲ್ಲಿ ಎಸ್‌ಎಸ್‌ಎಲ್‌ಸಿ (SSLC) ಫಲಿತಾಂಶ ಹೆಚ್ಚಿಸಲು ಸರ್ಕಾರ ನಾನಾ ಕಸರತ್ತು ನಡೆಸಿದೆ.ರಾಯಚೂರಿನಲ್ಲಿ ಸ್ವತಃ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಪ್ರಧಾನ ಕಾರ್ಯದರ್ಶಿಯೇ ಶಿಕ್ಷಕರು, ಅಧಿಕಾರಿಗಳಿಗೆ ಕಾರ್ಯಗಾರ ಮಾಡಿದ್ದಾರೆ. ಆದರೆ ಶಿಕ್ಷಕರ ಖಾಲಿ ಹುದ್ದೆಗಳನ್ನು ತುಂಬದೇ ಫಲಿತಾಂಶ ಸುಧಾರಣೆ ಹೇಗೆ ಅಂತ ಶಿಕ್ಷಣ ಪ್ರೇಮಿಗಳು ಪ್ರಶ್ನಿಸುತ್ತಿದ್ದಾರೆ.
ರಾಯಚೂರು ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ನೂರಾರು ಶೂನ್ಯ ಶಿಕ್ಷಕರ ಶಾಲೆಗಳಿವೆ. ಸುಮಾರು 25 ಸಾವಿರ ಶಿಕ್ಷಕರ ಹುದ್ದೆಗಳು ಖಾಲಿಯಿವೆ. ವಿಷಯವಾರು ಶಿಕ್ಷಕರಿಲ್ಲದೆ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಮರೀಚಿಕೆಯಾಗಿದೆ. ಆದರೂ ಶಿಕ್ಷಣ ಇಲಾಖೆ ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಿಸಲು ನಾನಾ ಕಾರ್ಯಕ್ರಮಗಳನ್ನ ಆಯೋಜಿಸುತ್ತಲೇ ಇದೆ. ಈ ವರ್ಷ ಜೂನ್‌ನಿಂದ 29 ಅಂಶಗಳಲ್ಲಿ ಕೆಲಸ ಮಾಡಲಾಗುತ್ತಿದ್ದು, ಆತ್ಮವಿಶ್ವಾಸದಿಂದ ವಿದ್ಯಾರ್ಥಿಗಳು ಪರೀಕ್ಷೆಗೆ ತಯಾರಾಗಿ ಪರೀಕ್ಷೆ ಬರೆಯಲು ಅನುಸರಿಸಬೇಕಾದ ವಿಧಾನಗಳ ಬಗ್ಗೆ ಸುತ್ತೋಲೆ ಹೊರಡಿಸಿ ಶಾಲೆಗಳಲ್ಲಿ ಪಾಠ ಮಾಡಲು ಸೂಚಿಸಲಾಗಿದೆ. ಶಿಕ್ಷಕರು, ಅಧಿಕಾರಿಗಳಿಗೆ ತರಬೇತಿ ಮೇಲೆ ತರಬೇತಿ ನೀಡುತ್ತಿದೆ. ಪಾಸಿಂಗ್ ಅಂಕವನ್ನ ಕೂಡ ಸರ್ಕಾರ ಇಳಿಸಿದೆ.
