ಉದಯವಾಹಿನಿ, ಅಸ್ಸಾಂ: ಕಾಜಿರಂಗ ನಿಜವಾಗಿಯೂ ಮುದ್ದಾಗಿದೆ. ಇಲ್ಲಿನ ಸೌಂದರ್ಯ ನೋಡಿ ನಾನು ಮೋಡಿಗೊಂಡಿದ್ದೇನೆ. ಇದೊಂದು ಅದ್ಬುತ ಲೋಕ ಎಂದು ಭಾರತದ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಹೇಳಿದರು. ಅಸ್ಸಾಂನ ಕಾಜಿರಂಗ ರಾಷ್ಟ್ರೀಯ ಉದ್ಯಾನವನಕ್ಕೆ ಪತ್ನಿಯೊಂದಿಗೆ  ಪ್ರವಾಸ ಮಾಡಿದ ಅವರು ಅಲ್ಲಿನ ಜೀಪ್ ಸಫಾರಿಯಲ್ಲಿ ಬಾಗೋರಿ ಅರಣ್ಯ ಶ್ರೇಣಿಯಲ್ಲಿ ಸುತ್ತಾಡಿದರು. ಉದ್ಯಾನವನದ ಸೌಂದರ್ಯ, ವನ್ಯಜೀವಿಗಳು ಮತ್ತು ನಿರ್ವಹಣೆ ಬಗ್ಗೆ ಅವರು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಎರಡು ದಿನಗಳ ಕಾಜಿರಂಗ ಪ್ರವಾಸದ ಸಂದರ್ಭದಲ್ಲಿ ಅವರು ಪತ್ನಿಯೊಂದಿಗೆ ಬಾಗೋರಿ ಶ್ರೇಣಿಯ ಪ್ರವೇಶ ಭಾಗದಲ್ಲಿರುವ ಸಾಂಪ್ರದಾಯಿಕ ಕೈಮಗ್ಗ ಮಳಿಗೆಗಳಿಗೆ ಭೇಟಿ ನೀಡಿದರು.
ಕಾಜಿರಂಗ ಪ್ರವಾಸದ ಅನುಭವವು ಉಲ್ಲಾಸಕರ ಮತ್ತು ಸ್ಮರಣೀಯವಾಗಿದೆ. ಈ ಉದ್ಯಾನವನವು ಅತ್ಯಂತ ಸುಂದರವಾಗಿದೆ. ಹೂಲಾಕ್ ಗಿಬ್ಬನ್‌ಗಳು, ಘೇಂಡಾಮೃಗಗಳು ಮತ್ತು ಹಲವಾರು ಪಕ್ಷಿ ಪ್ರಭೇದಗಳನ್ನು ಇಲ್ಲಿ ನಾನು ನೋಡಿದೆ. ಇದು ಅದ್ಭುತವೆನಿಸಿತು. ಉದ್ಯಾನದ ಪ್ರಶಾಂತ ವಾತಾವರಣಕ್ಕೆ ಮನಸೋತ ಕ್ರಿಕೆಟಿಗ, ಮಹಿಳಾ ಅರಣ್ಯ ಸಿಬ್ಬಂದಿ ಉಪಸ್ಥಿತಿ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದರು.ಉದ್ಯಾನವನದ ನಿರ್ವಹಣೆ ಅತ್ಯುತ್ತಮವಾಗಿದೆ ಎಂದ ಅವರು,ಪರಿಸರ ಪ್ರಿಯರು ಮತ್ತು ಪ್ರವಾಸಿಗರು ತಮ್ಮ ಜೀವಿತಾವಧಿಯಲ್ಲಿ ಒಮ್ಮೆಯಾದರೂ ಕಾಜಿರಂಗಕ್ಕೆ ಭೇಟಿ ನೀಡಬೇಕು ಎಂದು ಹೇಳಿದರು.ಭಾರತದಾದ್ಯಂತ ಸೌಂದರ್ಯ ಇದೆ. ಆದರೆ ಕಾಜಿರಂಗದಲ್ಲಿ ವನ್ಯಜೀವಿಗಳನ್ನು ಹತ್ತಿರದಿಂದ ನೋಡುವ ರೋಮಾಂಚನವನ್ನು ಆನಂದಿಸಬಹುದು ಎಂದರು.ಆಟಗಾರನಾಗಿ ಅಸ್ಸಾಂಗೆ ತಾವು ಹಿಂದೆ ಭೇಟಿ ನೀಡಿದ್ದನ್ನು ನೆನಪಿಸಿಕೊಂಡ ಅವರು, ವರ್ಷಗಳಲ್ಲಿ ತಾವು ಆಡಿರುವ ಸ್ಥಳಗಳು ಹೇಗೆ ರೂಪಾಂತರಗೊಂಡಿವೆ ಎಂಬುದನ್ನು ನೋಡಲು ಉತ್ಸುಕನಾಗಿದ್ದೇನೆ ಎಂದು ಹೇಳಿದರು.

Leave a Reply

Your email address will not be published. Required fields are marked *

error: Content is protected !!