ಉದಯವಾಹಿನಿ, ನವದೆಹಲಿ: ಎರಡನೇ ಟೆಸ್ಟ್ ಪಂದ್ಯದ ಆರಂಭಕ್ಕೂ ಮುನ್ನ ದಕ್ಷಿಣ ಆಫ್ರಿಕಾ ತಂಡಕ್ಕೆ ಆಘಾತವಾಗಿದೆ. ಗುವಾಹಟಿಯ ಬರ್ಸಪರ ಕ್ರೀಡಾಂಗಣದಲ್ಲಿ ಶನಿವಾರ ಆರಂಭವಾಗುವ ಎರಡನೇ ಟೆಸ್ಟ್ ಪಂದ್ಯದಿಂದಲೂ ಹಿರಿಯ ವೇಗಿ ಕಗಸೊ ರಬಾಡ ಹೊರ ಬಿದ್ದಿದ್ದಾರೆ. ಅವರು ಪಕ್ಕೆಲುಬು ಗಾಯದಿಂದ ಇನ್ನೂ ಗುಣಮುಖರಾಗದ ಕಾರಣ ಎರಡನೇ ಪಂದ್ಯದಲ್ಲಿಯೂ ಆಡುತ್ತಿಲ್ಲ ಎಂದು ದಕ್ಷಿಣ ಆಫ್ರಿಕಾ ತಂಡದ ನಾಯಕ ತೆಂಬಾ ಬವೂಮಾ ಸ್ಪಷ್ಟಪಡಿಸಿದ್ದಾರೆ. ಕೋಲ್ಕತಾ ಟೆಸ್ಟ್‌ಗೂ ಮುನ್ನ ಅಭ್ಯಾಸದ ವೇಳೆ ರಬಾಡ ಅವರು ಪಕ್ಕೆಲುಬು ಗಾಯಕ್ಕೆ ತುತ್ತಾಗಿದ್ದರು.
ಕಗಿಸೊ ರಬಾಡ ಅವರು ಇನ್ನೂ ಸಂಪೂರ್ಣವಾಗಿ ಫಿಟ್ ಆಗಿಲ್ಲ ಹಾಗೂ ಅವರು ಇನ್ನೂ ಚೇತರಿಸಿಕೊಳ್ಳುತ್ತಿದ್ದಾರೆ. ಹಾಗಾಗಿ ಅವರನ್ನು ಆಡಿಸಿ ಅಪಾಯ ತೆಗೆದುಕೊಳ್ಳಲು ತಂಡದ ವೈದ್ಯಕೀಯ ತಂಡ ಸಿದ್ದವಿಲ್ಲ ಎಂದು ಹರಿಣ ಪಡೆಯ ನಾಯಕ ತೆಂಬಾ ಬವೂಮಾ ತಿಳಿಸಿದ್ದಾರೆ. “ಕಗಿಸೊ ರಬಾಡ ಅವರು ಎರಡನೇ ಟೆಸ್ಟ್ ಪಂದ್ಯದಿಂದ ಹೊರ ನಡೆದಿದ್ದಾರೆ,” ಎಂದು ತೆಂಬಾ ಬವೂಮಾ ತಿಳಿಸಿದ್ದಾರೆ. ಅವರು ತಂಡಕ್ಕೆ ಅತ್ಯಂತ ಪ್ರಮುಖ ಆಟಗಾರ ಆದರೆ, ಅವರು ಸಂಪೂರ್ಣವಾಗಿ ಗುಣಮುಖರಾಗಲು ಇನ್ನಷ್ಟು ಹೆಚ್ಚಿನ ಸಮಯದ ಅಗತ್ಯವಿದೆ. ಅವರ ಅನುಪಸ್ಥಿತಿ ಪ್ರವಾಸಿ ತಂಡಕ್ಕೆ ಎರಡನೇ ಟೆಸ್ಟ್‌ನಲ್ಲಿ ತಾಂತ್ರಿಕ ಹಿನ್ನಡೆಯನ್ನು ತಂದೊಡ್ಡಲಿದೆ. ಇದರ ಹೊರತಾಗಿಯೂ ಮೊದಲನೇ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡ 30 ರನ್‌ಗಳಿಂದ ಗೆದ್ದು ಸರಣಿಯಲ್ಲಿ 1-0 ಮುನ್ನಡೆಯನ್ನು ಪಡೆದಿದೆ.
