ಉದಯವಾಹಿನಿ, ಮುಂಬಯಿ: ಟೀಮ್ ಇಂಡಿಯಾದ ಸ್ಟಾರ್ ಬ್ಯಾಟರ್ ಸ್ಮೃತಿ ಮಂಧಾನ ತಮ್ಮ ನಿಶ್ಚಿತಾರ್ಥವನ್ನು ವಿಶೇಷ ವಿಡಿಯೊ ಮೂಲಕ ದೃಢಪಡಿಸಿದ್ದಾರೆ. ಟೀಮ್ ಇಂಡಿಯಾ ಸಹ ಆಟಗಾರ್ತಿಯರಾದ ರಾಧ ಯಾದವ್, ಜೆಮಿಮಾ ರೋಡ್ರಿಗಸ್, ಅರುಂಧತಿ ರೆಡ್ಡಿ, ಶ್ರೇಯಾಂಕಾ ಪಾಟೀಲ್ ಜತೆಗೂಡಿ ಇನ್ಸ್‌ಸ್ಟಾಗ್ರಾಮ್ ರೀಲ್ ಮೂಲಕ ತಮ್ಮ ಜೀವನದ ವಿಶೇಷ ಕ್ಷಣವನ್ನು ಹಂಚಿಕೊಂಡಿದ್ದಾರೆ. ಸದ್ಯ ಈ ವಿಡಿಯೊ ವೈರಲ್ ಆಗಿದೆ. ಸ್ಮೃತಿ ಮಂಧಾನ ಅವರು ಗಾಯಕ ಹಾಗೂ ಸಂಗೀತ ಸಂಯೋಜಕ ಪಾಲಶ್ ಮುಚ್ಚಲ್ ಅವರನ್ನು ವಿವಾಹವಾಗಲಿದ್ದಾರೆ.
2006ರಲ್ಲಿ ರಿಲೀಸ್ ಆಗಿ ಲಗೋ ರಹೋ ಮುನ್ನಾ ಭಾಯಿ ಸಿನಿಮಾದ ‘ಸಮ್ಜೋ ಹೋಹಿ ಗಯಾ..’ ಹಾಡನ್ನು ಬಳಸಿಕೊಂಡು ಮಂಧಾನ ತಮ್ಮ ನಿಶ್ಚಿತಾರ್ಥವನ್ನು ಖಚಿತಪಡಿಸಿದ್ದಾರೆ. ವಿಡಿಯೋದ ಕೊನೆಯಲ್ಲಿ ಮಂಧಾನ ತಮ್ಮ ಉಂಗುರವನ್ನು ಕ್ಯಾಮೆರಾಗೆ ತೋರಿಸಿದ್ದಾರೆ. ಈಗಾಗಲೇ ವರದಿಯಾದ ಪ್ರಕಾರ ಸ್ಮೃತಿ ಮಂಧಾನ ಹಾಗೂ ಚಲನಚಿತ್ರ ನಿರ್ಮಾಪಕ ಪಾಲಶ್ ಮುಚ್ಚಲ್ ವಿವಾಹ ನವೆಂಬರ್ 23 ರಂದು ಮಹಾರಾಷ್ಟ್ರ ಸಾಂಗ್ಲಿಯಲ್ಲಿ ನಡೆಯಲಿದೆ ಎಂದು ತಿಳಿದುಬಂದಿದೆ. ಇತ್ತೀಚೆಗೆ ಇಂದೋರ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಪಲಾಶ್, ‘ಸ್ಮೃತಿ ಸದ್ಯದಲ್ಲೇ ಇಂದೋರ್‌ನ ಸೊಸೆ ಆಗಲಿದ್ದಾರೆ’ ಎಂದು ತಮ್ಮ ಮದುವೆ ವಿಚಾರವನ್ನು ಬಹಿರಂಗಪಡಿಸಿದ್ದರು.
ಮಹಾರಾಷ್ಟ್ರದ ಸಾಂಗ್ಲಿಯ ಸ್ಮೃತಿ ತಮ್ಮ ಸಹೋದರ ಕ್ರಿಕೆಟ್ ಆಡುವುದನ್ನು ನೋಡುತ್ತಾ ತಾವೂ ಬ್ಯಾಟ್, ಬಾಲ್ ಹಿಡಿದು ಮೈದಾನಕ್ಕೆ ಇಳಿದ ಮಂಧಾನ, 2013ರಲ್ಲಿ ತಮ್ಮ 16ನೇ ವರ್ಷದಲ್ಲೇ ಭಾರತ ಪರ ಆಡಲು ಶುರುವಿಟ್ಟ ಸ್ಮೃತಿ ಈಗ ವಿಶ್ವ ಕ್ರಿಕೆಟ್‌ನಲ್ಲೇ ಪ್ರಮುಖ ಬ್ಯಾಟರ್. ಚೊಚ್ಚಲ ವಿಶ್ವಕಪ್ ಗೆಲುವಿನಲ್ಲಿ ಸ್ಮೃತಿ ಕೊಡುಗೆ ಅತ್ಯಮೂಲ್ಯ. 9 ಪಂದ್ಯಗಳಲ್ಲಿ 1 ಶತಕ, 2 ಅರ್ಧಶತಕ ಸೇರಿ 434 ರನ್ ಗಳಿಸಿರುವ ಸ್ಮೃತಿ ಟೂರ್ನಿಯ 2ನೇ ಗರಿಷ್ಠ ಸ್ಕೋರರ್.
ಪಲಾಶ್ ಬಾಲಿವುಡ್‌ನಲ್ಲಿ ಸಂಗೀತ ನಿರ್ದೇಶಕನಾಗಿ, ನಿರ್ಮಾಪಕನಾಗಿ ಗುರುತಿಸಿಕೊಂಡಿದ್ದಾರೆ. ಟಿ ಸೀರಿಸ್, ಜೀ ಮ್ಯೂಸಿಕ್‌ಗಾಗಿ ಸುಮಾರು 40ಕ್ಕೂ ಅಧಿಕ ಮ್ಯೂಸಿಕ್ ವಿಡಿಯೋಗಳನ್ನು ಪಾಲಾಶ್ ಕಂಪೋಸ್ ಮಾಡಿದ್ದಾರೆ. ‘ಡಿಶ್ಕಿಯಾವೂನ್’, ‘ಬೂತ್‌ನಾಥ್ ರಿಟರ್ಟ್ಸ್’ ಸೇರಿದಂತೆ ಒಂದಷ್ಟು ಬಾಲಿವುಡ್ ಸಿನಿಮಾಗಳಿಗೆ ಟ್ಯೂನ್ ಹಾಕಿದ್ದಾರೆ. ಅಭಿಷೇಕ್ ಬಚ್ಚನ್ – ದೀಪಿಕಾ ಪಡುಕೋಣೆ ನಟನೆಯ ‘ಖೇಲೀಂ ಹಮ್ ಜೀ ಜಾನ್ ಸೇ’ ಚಿತ್ರದ ಸಣ್ಣ ಪಾತ್ರದಲ್ಲಿ ಪಾಲಾಶ್ ಮಿಂಚಿದ್ದರು.
