ಉದಯವಾಹಿನಿ, ಅನೇಕರು ಯೌವನದಿಂದ ಹಾಗೂ ಸುಂದರವಾಗಿ ಕಾಣುವಂತೆ ಸೌಂದರ್ಯ ಹೊಂದಲು ಹಂಬಲಿಸುತ್ತಾರೆ. ಮನೆಯಲ್ಲಿ ಲಭ್ಯವಿರುವ ಪದಾರ್ಥಗಳಿಂದ ಫೇಸ್ಪ್ಯಾಕ್ಗಳನ್ನು ತಯಾರಿಸುತ್ತಾರೆ. ಕೆಲವರು ಬ್ಯೂಟಿ ಪಾರ್ಲರ್‌ಗಳಿಗೆ ತೆರಳುತ್ತಾರೆ. ಪಾರ್ಲರ್‌ಗೆ ಹೋಗದೆ ನೈಸರ್ಗಿಕವಾಗಿ ಸೌಂದರ್ಯವನ್ನು ಹೆಚ್ಚಿಸಬೇಕಾದರೆ, ನಿಮ್ಮ ಆಹಾರ ಕ್ರಮದಲ್ಲಿ ಸಬ್ಜಾ ಬೀಜಗಳನ್ನು ಸೇರಿಸಿಕೊಳ್ಳಬೇಕು ಎಂದು ಸೌಂದರ್ಯ ತಜ್ಞರು ತಿಳಿಸುತ್ತಾರೆ. ಸಬ್ಜಾ ನಿಯಮಿತವಾಗಿ ಸೇವಿಸುವುದರಿಂದ ಆರೋಗ್ಯದ ದೃಷ್ಟಿಯಿಂದ ಮಾತ್ರವಲ್ಲದೆ ಸೌಂದರ್ಯದ ದೃಷ್ಟಿಯಿಂದಲೂ ಹಲವು ಪ್ರಯೋಜನಗಳನ್ನು ಪಡೆಯಬಹುದು.
ನಿರ್ವಿಶೀಕರಣಕ್ಕೆ ಸಹಾಯ: ಪ್ರಸ್ತುತ ಪರಿಸರ ಮಾಲಿನ್ಯದಿಂದ ಚರ್ಮವು ತನ್ನ ಹೊಳಪನ್ನು ಕಳೆದುಕೊಳ್ಳುತ್ತದೆ. ಧೂಳು ಹಾಗೂ ಕೊಳೆಯ ಪರಿಣಾಮಗಳಿಂದ ಚರ್ಮದ ಮೇಲೆ ಮೊಡವೆಗಳು ಬರುವ ಸಾಧ್ಯತೆಗಳು ಹೆಚ್ಚಿರುತ್ತವೆ. ಈ ಪ್ರಕ್ರಿಯೆಯಲ್ಲಿ ಚರ್ಮವನ್ನು ಒಳಗಿನಿಂದ ಶುದ್ಧೀಕರಿಸಲು ಸಬ್ಜಾ ಬೀಜಗಳು ಉತ್ತಮ. ಅವುಗಳಲ್ಲಿರುವ ನೈಸರ್ಗಿಕ ನಿರ್ವಿಶೀಕರಣ ಗುಣಲಕ್ಷಣಗಳು ಚರ್ಮದ ಒಳ ಪದರಗಳಲ್ಲಿ ಸಂಗ್ರಹವಾಗಿರುವ ವಿಷವನ್ನು ಹೊರಹಾಕುತ್ತದೆ. ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ ಹಾಗೂ ಚರ್ಮದ ಹೊಳಪನ್ನು ಹೆಚ್ಚಿಸುತ್ತದೆ.
ಸೋಂಕುಗಳನ್ನು ತಡೆಯಲು ಒಳ್ಳೆಯದು: ಕೆಲವರು ಚರ್ಮದ ಸೋಂಕಿನಿಂದ ಬಳಲುತ್ತಿದ್ದಾರೆ. ಅಂತಹವರು ಸಬ್ಜಾ ಬೀಜಗಳನ್ನು ಆಹಾರವಾಗಿ ನಿಯಮಿತವಾಗಿ ಸೇವಿಸಬೇಕು. ಇಂಟರ್ನ್ಯಾಷನಲ್ ಜರ್ನಲ್ ಆಫ್ ಫಾರ್ಮಾಸ್ಯುಟಿಕಲ್ ಸೈನ್ಸಸ್ ಅಧ್ಯಯನವು, ಸಬ್ಜಾ ಬೀಜವು ಪ್ರತಿಜೀವಕ, ಆ್ಯಂಟಿಫಂಗಲ್ ಹಾಗೂ ಆ್ಯಂಟಿಮೈಕ್ರೊಬಿಯಲ್ ಗುಣಲಕ್ಷಣಗಳು ಚರ್ಮದ ಸೋಂಕುಗಳಿಗೆ ಕಾರಣವಾಗುವ ಬ್ಯಾಕ್ಟೀರಿಯಾ ಹಾಗೂ ಇತರ ಸೂಕ್ಷ್ಮಜೀವಿಗಳ ಬೆಳವಣಿಗೆಯನ್ನು ತಡೆಯಲು ಸಹಾಯವಾಗುತ್ತದೆ ಎಂದು ತಿಳಿಸಿದೆ.
ಚರ್ಮದ ಸುಕ್ಕುಗಳನ್ನು ತಡೆಯುತ್ತೆ: ಕೆಲವೊಮ್ಮೆ ಚಿಕ್ಕ ವಯಸ್ಸಿನಲ್ಲಿಯೇ ಕೆಲವು ಜನರಿಗೆ ಚರ್ಮದಲ್ಲಿ ಸುಕ್ಕುಗಳು ಬರುತ್ತವೆ. ಹೀಗಾಗದಂತೆ ತಡೆಯಲು ಅನೇಕರು ವಯಸ್ಸಾದಂತೆ ತಡೆಯಲು ಕ್ರೀಮ್‌ಗಳನ್ನು ಬಳಸುತ್ತಾರೆ. ಆದರೆ, ಈ ಸಮಸ್ಯೆಗೆ ಸಬ್ಜಾ ಬೀಜಗಳು ಉತ್ತಮ ಎಂದು ತಜ್ಞರು ಹೇಳುತ್ತಾರೆ. ಇವುಗಳಿಂದ ಮಾಡಿದ ಫೇಸ್ ಪ್ಯಾಕ್ ಅನ್ವಯಿಸುವುದು ಉತ್ತಮ ಫಲಿತಾಂಶವನ್ನು ನೀಡುತ್ತದೆ. ಒಂದು ಚಮಚ ತೆಂಗಿನ ಎಣ್ಣೆಯಲ್ಲಿ ಸಾಕಷ್ಟು ಸಬ್ಜಾ ಬೀಜದ ಪುಡಿಯನ್ನು ಬೆರೆಸಿ, ಮಿಶ್ರಣವನ್ನು ಮುಖಕ್ಕೆ ಹಚ್ಚಿ, ಒಣಗಲು ಬಿಡಬೇಕು ಮತ್ತು ಬಳಿಕ ಬೆಚ್ಚಗಿನ ನೀರಿನಿಂದ ತೊಳೆಯಬೇಕು.
ಕೂದಲಿನ ಆರೋಗ್ಯಕ್ಕೆ ಬೆಸ್ಟ್: ಸಬ್ಜಾ ಬೀಜಗಳು ಚರ್ಮಕ್ಕೆ ಮಾತ್ರವಲ್ಲದೆ ಕೂದಲಿನ ಆರೋಗ್ಯಕ್ಕೂ ಕೂಡ ಉತ್ತಮ. ಇದರಲ್ಲಿರುವ ವಿಟಮಿನ್ ‘ಕೆ’, ಬೀಟಾ ಕ್ಯಾರೋಟಿನ್, ಪ್ರೋಟೀನ್‌ಗಳು ಕೂದಲು ಹಾಗೂ ಕಿರುಚೀಲಗಳನ್ನು ಬಲಪಡಿಸುತ್ತವೆ. ಕೂದಲನ್ನು ಪೋಷಿಸಿ ರೇಷ್ಮೆಯಂತೆ ಮೃದುವಾಗಿಸುತ್ತದೆ. ಪ್ರತಿದಿನ ಆಹಾರದಲ್ಲಿ ಸಬ್ಜಾ ಬೀಜಗಳನ್ನು ಸೇರಿಸಿಕೊಂಡರೆ ಕೂದಲು ಉದುರುವಿಕೆಯ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಸಬ್ಜಾ ಬೀಜಗಳು ನೈಸರ್ಗಿಕವಾಗಿದ್ದರೂ, ಕೆಲವರಿಗೆ ಇವು ಇಷ್ಟವಾಗದಿರಬಹುದು. ಒಮ್ಮೆ ಪ್ರಯತ್ನಿಸಿ ಯಾವುದೇ ಸಮಸ್ಯೆಗಳಿಲ್ಲ ಎಂದು ತಿಳಿದ ಬಳಿಕ ಸಬ್ಜಾ ಬೀಜಗಳನ್ನು ಬಳಸುವುದನ್ನು ಮುಂದುವರಿಸುವುದು ಉತ್ತಮ ಎಂದು ಆರೋಗ್ಯ ತಜ್ಞರು ತಿಳಿಸುತ್ತಾರೆ.
