ಉದಯವಾಹಿನಿ, ಚಳಿಗಾಲ ಎಂದಾಕ್ಷಣ ನೆನಪಾಗುವುದೇ ಹೆಚ್ಚಿನ ಪ್ರಮಾಣದ ಚಳಿ. ಈ ಶೀತಲ ವಾತಾವರಣದಲ್ಲಿ ಆರೋಗ್ಯವನ್ನು ಮತ್ತು ಶಕ್ತಿಯನ್ನು ಕಾಪಾಡಿಕೊಳ್ಳುವುದು ಸ್ವಲ್ಪ ಕಷ್ಟವೇ. ಈ ಚಳಿಗಾಲದ ಹಿಂದಯೇ ನಾನಾ ಆರೋಗ್ಯ ಸಮಸ್ಯೆಗಳು ಬರುತ್ತದೆ, ಈ ಋತುಮಾನದಲ್ಲಿ ವೇಗವಾಗಿ ನಮ್ಮ ದೇಹ ಅನಾರೋಗ್ಯಕ್ಕೆ ಒಳಗಾಗುತ್ತದೆ. ಈ ಸಮಯದಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅತ್ಯಗತ್ಯವಾಗಿದ್ದು, ಶೀತ, ಜ್ವರ, ಕೆಮ್ಮುವಿನ ಜೊತೆಗೆ ಸೋಂಕುಗಳಿಗೂ ತುತ್ತಾಗುವ ಸಾಧ್ಯತೆಯೂ ಇರುತ್ತದೆ. ಆದ್ದರಿಂದ, ಈ ಋತುವಿನಲ್ಲಿ ಪೌಷ್ಠಿಕಾಂಶಗಳಿಂದ ಸಮೃದ್ಧವಾದ ಆಹಾರ ಸೇವನೆ ಅತ್ಯಂತ ಅವಶ್ಯಕವಾಗಿದ್ದು, ದೇಹ ಉತ್ತಮ ಸ್ಥಿತಿಯಲ್ಲಿ ಇರಬೇಕೆಂದರೆ ಉತ್ತಮ ಗುಣಮಟ್ಟದ ಆಹಾರವನ್ನು ಸೇವಿಸುವುದು ಒಳ್ಳೆಯದು.
ದೇಹದಲ್ಲಿ ರೋಗ ನಿರೋಧಕ ಶಕ್ತಿ ಎಲ್ಲಿಯವರೆಗೂ ಚೆನ್ನಾಗಿರುತ್ತದೊ ಅಲ್ಲಿಯವರೆಗೆ ನಿಮಗೆ ಯಾವುದೇ ರೀತಿಯ ತೊಂದರೆಗಳು ಬಾಧಿಸುವುದಿಲ್ಲ. ಆದ್ದರಿಂದ ಚಳಿಗಾಲದಲ್ಲಿ ರೋಗನಿರೋಧಕ ಶಕ್ತಿಯನ್ನು ಉತ್ತಮ ಸ್ಥಿತಿಯಲ್ಲಿ ಇಟ್ಟುಕೊಳ್ಳಲು ನೆರವಾಗುವಂತಹ ಆಹಾರಗಳನ್ನು ಸೇವಿಸುವುದು ಉತ್ತಮವಾಗಿದ್ದು, ಈ ಟೈಂ ಅಲ್ಲಿ ಕಾಡುವ ಅನಾರೋಗ್ಯ ಸಮಸ್ಯೆಗಳನ್ನು ತಡೆಯಬೇಕಾದರೆ ಚಳಿಗಾಲದ ಅವಧಿಯಲ್ಲಿ ಸಿಗುವ ಕೆಲವು ಆಹಾರ ಪದಾರ್ಥಗಳನ್ನು ಸೇವಿಸಬೇಕು. ಅಂತಹವುಗಳಲ್ಲಿ ಪಾಲಕ್ ಸೊಪ್ಪು (Spinach) ಒಂದಾಗಿದ್ದು, ಹಸಿರು ತರಕಾರಿಗಳು ದೇಹಕ್ಕೆ ತುಂಬಾ ಒಳ್ಳೆಯದು ಎಂದು ತಜ್ಞರು ಹೇಳುತ್ತಾರೆ. ನಮ್ಮ ದೇಹಕ್ಕೆ ಅಗತ್ಯವಾಗಿ ಬೇಕಾದ ಬಹುಮುಖ್ಯ ವಿಟಮಿನ್ ಮತ್ತು ಖನಿಜಾಂಶಗಳು ಪಾಲಕ್ ಸೊಪ್ಪಿನಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಕಬ್ಬಿಣ, ಕ್ಯಾಲ್ಸಿಯಂ, ಮೆಗ್ನೀಷಿಯಂ, ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಕೆ ಇದರಲ್ಲಿ ಸಾಕಷ್ಟಿದೆ. ಈ ಪೌಷ್ಟಿಕಾಂಶಗಳು ನಮ್ಮ ಆರೋಗ್ಯಕ್ಕೆ ಅನುಕೂಲಕರವಾಗಿದ್ದು, ಪ್ರತಿರಕ್ಷಣಾ ಶಕ್ತಿ, ಚರ್ಮದ ಆರೋಗ್ಯ ಅಥವಾ ಬಲವಾದ ಮೂಳೆಗಳಿಗಾಗಿ, ನಿಮ್ಮ ದೇಹಕ್ಕೆ ಅಗತ್ಯವಾದ ಜೀವಸತ್ವಗಳು ಮತ್ತು ಖನಿಜಗಳನ್ನು ನೀಡುವ ಆಹಾರಗಳಲ್ಲಿ ಪಾಲಕ್ ಸೊಪ್ಪು ಅಗ್ರಗಣ್ಯ ಸ್ಥಾನದಲ್ಲಿದೆ.
