ಉದಯವಾಹಿನಿ ಪೌಷ್ಠಿಕಾಂಶದ ಕುರಿತಾ ಯಾರೇ ಮಾತನಾಡಿದರು ಪ್ರೋಟೀನ್ ಮತ್ತು ನ್ಯೂಟ್ರಿಷಿಯನ್ ಕುರಿತು ಹೆಚ್ಚಾಗಿ ಮಾತನಾಡುತ್ತಾರೆ. ಆದರೆ, ಫೈಬರ್ ಎಂಬ ಅಂಶವನ್ನು ಮರೆತೇ ಹೋಗುತ್ತಾರೆ. ಯಾವುದೇ ವ್ಯಕ್ತಿ ನಿಮಗಿಷ್ಟವಾದ ಆಹಾರ ಯಾವುದು ಎಂದರೆ, ಐಸ್ ಕ್ರೀಮ್, ಕೇಕ್, ಚಿಕನ್, ಮಟನ್ ಸೇರಿದಂತೆ ಇನ್ನಿತರ ಹೆಸರುಗಳನ್ನು ಹೇಳುವುದುಂಟು.
ಇನ್ನು ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಕೆಲವು ಮಂದಿ ಮಾತ್ರ ಓಟ್ಸ್, ಮೊಸರು, ಹಣ್ಣು, ತರಕಾರಿಗಳಿಂದ ಮಾಡಿದ ಆಹಾರಗಳ ಹೆಸರು ಹೇಳುತ್ತಾರೆ. ಆದರೆ, ನಾವು ಸೇವಿಸುವ ಆಹಾರ ಹೇಗಿರಬೇಕು ಮತ್ತು ನಾವು ಈಗ ಸೇವಿಸುತ್ತಿರುವ ಆಹಾರದಲ್ಲಿ ಯಾವೆಲ್ಲಾ ಅಂಶಗಳು ಸೇರಿವೆ, ಇವುಗಳು ನಮ್ಮ ಆರೋಗ್ಯದ ಮೇಲೆ ಯಾವ ರೀತಿ ಪರಿಣಾವನ್ನು ಬೀರುತ್ತದೆ ಎನ್ನುವುದನ್ನು ತಿಳಿದುಕೊಳ್ಳುವುದು ಮುಖ್ಯವಾಗುತ್ತದೆ.
ಆರೋಗ್ಯಕರ ಜೀವನಶೈಲಿ ನಡೆಸಬೇಕೆಂದರೆ ಪ್ರೋಟೀನ್, ನ್ಯೂಟ್ರಿಷಿಯನ್ ಜೊತೆಗೆ ಫೈಬರ್’ಯುಕ್ತ ಆಹಾರ ಸೇವನೆ ಕೂಡ ಅತೀ ಮುಖ್ಯವಾಗುತ್ತದೆ.
ಆಹಾರದಲ್ಲಿ ನಾರಿನಾಂಶ ಸೇರ್ಪಡೆ ಮಾಡಿದರೆ ಅದು ನಮಮ ಜೀರ್ಣಕ್ರಿಯೆಯನ್ನು ಬೆಂಬಲಿಸುವುದರಿಂದ ಹಿಡಿದು ರಕ್ತದಲ್ಲಿನ ಸಕ್ಕರೆ ಮತ್ತು ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುವವರೆಗೆ ದೀರ್ಘಕಾಲೀನ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಅತ್ಯಂತ ಶಕ್ತಿಶಾಲಿ ಪಾತ್ರಗಳನ್ನು ನಿರ್ವಹಿಸುತ್ತದೆ. ಇಷ್ಟಕ್ಕೂ ಏನಿದು ಫೈಬರ್ (ನಾರಿನಾಂಶ), ನಮ್ಮ ದೇಹಕ್ಕೆ ಅದು ಮುಖ್ಯವೇಕೆ ಅಂತೀರಾ…? ಈ ಬಗ್ಗೆ ಇಲ್ಲಿದೆ ಮಾಹಿತಿ…ಸಸ್ಯಮೂಲ ಆಹಾರ ಉತ್ಪನ್ನಗಳ ಜೀರ್ಣವಾಗದ ಭಾಗವೇ ನಾರು. ಸಾಮಾನ್ಯವಾಗಿ ಆಹಾರ ಪದಾರ್ಥಗಳು ಬಾಯಿ, ಜಠರ ಹಾಗೂ ಸಣ್ಣ ಕರುಳುಗಳಲ್ಲಿ ವಿವಿಧ ಕಿಣ್ವಗಳ ಸಹಾಯದಿಂದ ಅತಿ ಸಣ್ಣ ಕಣಗಳಾಗಿ ಮಾರ್ಪಾಡಾಗಿ ನಂತರ ಪೌಷ್ಟಿಕಾಂಶಗಳ ರೂಪದಲ್ಲಿ ರಕ್ತ ಪರಿಚಲನೆಯನ್ನು ಸೇರುತ್ತವೆ. ಅವುಗಳ ಜೊತೆಯಲ್ಲಿಯೇ ಜೀರ್ಣವಾಗದೆಯೇ ಉಳಿಯುವ ಕೆಲವು ಅಂಶಗಳೂ ಆಹಾರದಲ್ಲಿರುತ್ತವೆ. ಜೀರ್ಣವಾಗದ ಮಾತ್ರಕ್ಕೆ ಈ ನಾರು ಅನುಪಯುಕ್ತ ಎಂದು ನೀವು ತಿಳಿದಿದ್ದರೆ, ಅದು ಖಂಡಿತ ತಪ್ಪು. ಇದು ಹಲವು ಬಗೆಯಲ್ಲಿ ಶರೀರದ ಆರೋಗ್ಯವನ್ನು ಕಾಪಾಡಲು ಸಹಕಾರಿಯಾಗಿದೆ.ಆಹಾರದಲ್ಲಿ 3 ಬಗೆಯ ನಾರಿನಾಂಶವಿರುತ್ತದೆ. ಅವೆಂದರೆ, ಕರಗಬಲ್ಲ ನಾರಿನಾಂಶ, ಕರಗದ ನಾರಿನಾಂಶ ಹಾಗೂ ಜೀರ್ಣವಾಗದ ಪಿಷ್ಟದ ಅಂಶ. ಕರಗಬಲ್ಲ ನಾರಿನಾಂಶವು ಆಹಾರವು ಜಠರದಿಂದ ಕರುಳುಗಳಿಗೆ ತಲುಪುವ ವೇಗವನ್ನು ನಿಧಾನಿಸುತ್ತದೆ. ಇದರಿಂದ ವ್ಯಕ್ತಿಗೆ ಹೊಟ್ಟೆ ತುಂಬಿದಂತಹ ಭಾವ ಉಂಟಾಗುವುದರಿಂದ ಬಹಳ ಹೊತ್ತಿನವರೆಗೆ ಹಸಿವಿನ ಅನುಭವವಾಗುವುದಿಲ್ಲ. ಅಲ್ಲದೆ, ಶರೀರದಲ್ಲಿನ ಕೊಲೆಸ್ಟ್ರಾಲ್ ವಿಸರ್ಜನೆಗೆ ನೆರವಾಗುವ ಮೂಲಕ ಅದರ ಪ್ರಮಾಣವನ್ನು ಕಡಿಮೆ ಮಾಡುವಲ್ಲಿ ಹಾಗೂ ರಕ್ತದ ಸಕ್ಕರೆ ಅಂಶವನ್ನು ಸ್ಥಿರಗೊಳಿಸುವಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತದೆ.
ಕರಗದ ನಾರಿನಾಂಶವು ನೀರನ್ನು ಹೀರಿಕೊಂಡು, ಕರುಳುಗಳಲ್ಲಿನ ಆಹಾರದ ಕಣಗಳು ಮೆತ್ತಗಾಗಲು ಮತ್ತು ಆ ಮೂಲಕ ಕರುಳುಗಳ ನಿಯಮಿತ ಚಲನೆಗೆ ಸಹಕರಿಸುತ್ತದೆ. ಇದು ಕರುಳುಗಳ ಕಾರ್ಯಕ್ಷಮತೆಯನ್ನು ಸುಧಾರಿಸಲು ಹಾಗೂ ಅವುಗಳ ಆರೋಗ್ಯವನ್ನು ಕಾಪಾಡಲು ಬಹಳ ಮುಖ್ಯ.ಜೀರ್ಣವಾಗದ ಪಿಷ್ಟವು ಕರುಳುಗಳಲ್ಲಿ ಶರೀರಕ್ಕೆ ಅತ್ಯಗತ್ಯವಾದ ಸ್ನೇಹಮಯಿ ಸೂಕ್ಷ್ಮಾಣುಗಳ ಉತ್ಪತ್ತಿಗೆ ನೆರವಾಗುತ್ತದೆ. ಈ ಸೂಕ್ಷ್ಮಾಣುಗಳು ಜೀರ್ಣವಾಗದ ಆಹಾರ ಪದಾರ್ಥಗಳ ನಿರ್ವಹಣೆಗೆ, ರೋಗಕಾರಕ ಸೂಕ್ಷ್ಮಾಣುಗಳ ವಿರುದ್ಧ ಹೋರಾಡಲು ಹಾಗೂ ಕರುಳಿನ ರೋಗ ನಿರೋಧಕ ವ್ಯವಸ್ಥೆಯ ಭಾಗವಾಗಿ ಕಾರ್ಯನಿರ್ವಹಿಸುತ್ತವೆ.

Leave a Reply

Your email address will not be published. Required fields are marked *

error: Content is protected !!